Sunday, January 20, 2013


ಅಯ್ಯೋ ಸ್ವಾಮಿ ನೀವ್ಯಾಕೆ ಹೀಗೆ? ಅಲ್ಲಲ್ಲ ನಾವ್ಯಾಕೆ ಹೀಗೆ?


ನಾವು ಯಾವಾಗ್ಲೂ ಯೋಚಿಸುವುದು ಇನ್ನೊಬ್ಬರ ಬಗೆಗೆ ಮಾತ್ರ… ! ದಿನ ಪೂರ್ತಿ ಹರಟುವ ಚಾಳಿ ಇರುವವರೂ ಸಮಯ ಸಿಕ್ಕಾಗಲೆಲ್ಲ ಮಾತನಾಡುವುದು ಇನ್ನೊಬ್ಬರ ಬಗೆಗೆ ಮಾತ್ರ…. ಎಂದಾದರೂ ನನ್ನ ಹಾಗೆಯೆ ನೀವೂ ಕೂಡಾ ಗಮನಿಸಿರಬಹುದು ಅಂದುಕೊಂಡಿದ್ದೇನೆ……….! ಕುಂಬಳ ಕಾಯಿ ಕಳ್ಳ ಅಂದ ಕೂಡಲೇ ಹೆಗಲಿಮುಟ್ಟಿಕೊಂಡ ಎನ್ನುವ ಹಾಗಿದೆ ನಮ್ಮ ಪರಿಸ್ಥಿತಿ. ! ಯಾರು ಯಾರೋ ಮಾಡಿದ ಪಾಪದ ಬಗ್ಗೆ ಯೋಚಿಸುತ್ತೇವೆ, ಕೊರಗುತ್ತೇವೆ, ನಾವು ಮಾಡುವುದೇನು, ಮಾಡಿದ್ದೇನು, ಮಾಡಬೇಕಾಗುವುದೇನು ಎಂದಾದರೂ ಯೊಚಿಸಿದ್ದಿದೆಯೆ?………..

ಅದ್ಯಾವುದೋ ಸಿನಿಮಾ ನಟನ ಕುಟುಂಬದಲ್ಲಿ ಬಿರುಕುಂಟಾಗಿದೆ ಎಂದಾಗ ದಿನ ಇಡೀ ಬೇರೆ ಬೇರೆ ಚಾನೆಲ್ ಗಳಲ್ಲಿ ಚರ್ಚೆ ನಡೆಯುತ್ತದೆ, ಪೇಪರಿನ ಮುಖಪುಟದಲ್ಲೆ ದಪ್ಪ ಅಕ್ಷರದಲ್ಲಿ ಪುಟಗಟ್ಟಲೆ ಬರೆಯುತ್ತೇವೆ, ದಿನ ಪೂರ್ತಿ ಚಾನೆಲ್ ಮುಂದೆ ಕುಳಿತು ಭೂಮಿಯೆ ಮುಳುಗಿದ ಹಾಗೆ, ಆಕಾಶವೇ ತಲೆಮೇಲೆ ಬಿದ್ದ ಹಾಗೆ ಮರುಗುತ್ತೇವೆ…….ಆದರೆ ನಮ್ಮ ಮನೆಯ ಬಗ್ಗೆ, ನಮ್ಮ ನೆರೆಹೊರೆಯಲ್ಲೇ ನಡೆಯುವ ಹಲವಾರು ಕುಟುಂಬಗಳ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದು ಎಂದಾದರೂ ಇದೆಯೆ? ಹುಚ್ಚರು ನಾವು………… ಮನೆಯ ಮುಂದೆ ನಡೆಯುವ ಅಚಾತುರ್ಯಗಳು ಕಂಡೂ ಕಾಣದಂತಹ ಕುರುಡರು ನಾವು; ಅದ್ಯಾವುದೋ ಊರಲ್ಲಿ ನಡೆದ ಸಣ್ಣ ವಿಷಯ ಗಂಭೀರವಾಗಿ ಕಂಡಿದೆ ನಮಗೆ!!!!!!!

ಇತ್ತೀಚೆಗೆ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಲ್ಲಿ ಕೇಳಿದ್ದೆ ದೆಹಲಿಯ ರೇಪ್ ಬಗ್ಗೆ ನಿಮಗೇನನ್ನಿಸಿದೆ? ಕೆಲವು ಧ್ವನಿಗಳು ಕೇಳಿದ್ದು ಹೀಗೆ: ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈಗೆ ಈ ಶಿಕ್ಷೆ!!!!!!!!  ನಾವು ಮೆರವಣಿಗೆ ಹೋಗುವುದಿಲ್ಲ, ಅದ್ರಿಂದ ನಮಗೆನು ಲಾಭ? ಹೇಗೆ ನಾನಾ ತರಹೇವಾರಿ ಉತ್ತರಗಳು!!!!!!! ಇನ್ನೂ ಮುಂದುವರಿದು ನಮ್ಮ ಮನೆಯವರಲ್ಲಿ ಯಾರಾದರೂ ಈ ಸ್ಥಿತಿ ತಲುಪಿದಾಗಲೂ ಹಾಗೆಯೇ ಯೋಚಿಸುವುದು ಸಾಧ್ಯವೆ? ನೆರೆಮನೆಗೆ ತಗುಲಿದ ಬೆಂಕಿಯ ಕಿಡಿ ನಮ್ಮಲ್ಲಿಗೂ ತಲುಪದಿದ್ದೀತೆ? ನಾವೇಕೆ ಇಷ್ಟೂ ಕುಬ್ಜರಾಗುತ್ತಿದ್ದೇವೆ? ನಾವೆಷ್ಟು ಸ್ವಾರ್ಥಿಗಳು! ಅದೆಷ್ಟೋ ಸಲ ನಾನು ನನ್ನನ್ನೇ ಕೇಳಿಕೊಳ್ಳುವುದಿದೆ…!

ಸಮಾಜದ ಒಳಿತು ಕೆಡುಕುಗಳಿಗೆ ಸ್ಪಂದಿಸಬೇಕಾದ ಮಾಧ್ಯಮಗಳು ಒಬ್ಬೊಬ್ಬರ ವೈಯುಕ್ತಿಕ ವಿಚಾರಗಳಿಗೆ ಮಣೆ ಹಾಕುತ್ತಿವೆ ಎಂದರೆ ಅದಕ್ಕಿಂತ ಹೆಚ್ಚಿನ ಅವಮಾನ ನಮಗೆ ಇನ್ನೊಂದಿದೆಯೆ? ಇದೂ ಪ್ರಜಾಪ್ರಭುತ್ವವೆ? ಬೇಲಿಯೆ ಎದ್ದು ಹೊಲ ಮೇದಂತೆ ಅಲ್ಲವೇ? ಕೇವಲ ನಾಲ್ಕು ಗೋಡೆಗಳ ನಡುವೆ ನಡೆಯ ಬೇಕಾದ ದೃಶ್ಯಗಳು ದಿನ ಪೂರ್ತಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲಿರುತ್ತವೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಒಬ್ಬ  ಸುಲಭವಾಗಿ ಹೇಗೆ ತಪ್ಪಿಸಿಕೊಳ್ಳಬಹುದೆನ್ನುವ ಪರಿಹಾರೋಪಾಯಗಳು ಅಲ್ಲೇ ಕಾಣಸಿಗುತ್ತವೆ ಎಂದಾದ ಮೇಲೆ ಯಾವುದುಂಟು ಯಾವುದಿಲ್ಲ ನೀವೇ ಹೇಳಿ!!!!!!!!!!!!

 ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗಬಲ್ಲ ಮಾಧ್ಯಮಗಳು ಇಂದು ಅದನ್ನು ಮೊಟಕುಗೊಳಿಸುವಲ್ಲೂ ಕಾರಣೀಭೂತವಾಗಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ… ತಮ್ಮ ಪ್ರಚಾರಕ್ಕೋಸ್ಕರ ಮಾಧ್ಯಮಗಳು ಕಂಡುಕೊಂಡ ಮಾರ್ಗಗಳನ್ನೊಮ್ಮೆ ಅವಲೋಕಿಸಿದರೆ ಅಸಹ್ಯವೆಸುತ್ತದೆ…..!  ನಮ್ಮಲ್ಲಿನ ಹುಳುಕುಗಳನ್ನು ಮುಚ್ಚುವುದಕ್ಕೋಸ್ಕರ ಇನ್ನೊಬ್ಬರನ್ನು ಬೊಟ್ಟು ಮಾಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವೊಮ್ಮೆ ಬೇಸರವಾಗುತ್ತದೆ: ರೋಷ ಉಕ್ಕುತ್ತದೆ……. ಆಗಲೂ ಅಂದುಕೊಳ್ಳುತ್ತೇನೆ ನಾವೆಷ್ಟು ಅಸಹಾಯಕರು!!!!!!!!!!!!!!???????

ಲೋಕದ ಡೊಂಕ ನೀವೇಕೆ ತಿದ್ದುವಿರಿ… ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ… ದಾಸರವಾಣಿ ನಮ್ಮ ಮನದಾಳಕ್ಕೆ ಮುಟ್ಟಿ ನಾವೆಚ್ಚೆತ್ತುಕೊಂಡು ಸ್ವಲ್ಪ ಮಟ್ಟಿಗಾದರೂ ನಮ್ಮನ್ನು ನಾವೇ ತಿದ್ದಿಕೊಂಡು ಲೋಕಕಲ್ಯಾಣಕ್ಕೆ ಕಿರು ಕಾಣಿಕೆಯನ್ನಾದರೂ ಸಲ್ಲಿಸುವ ಮನೋಭಾವ ನಮ್ಮೆಲ್ಲರಲ್ಲಿ ಬೆಳೆಯಲಿ ಎಂದು ಆಶಿಸೋಣವಲ್ಲವೆ?

No comments:

Post a Comment