Monday, August 12, 2013

ಪ್ರೀತಿ ಮಾಡೋದು ತಪ್ಪೇ 

ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು………….. ಚಿತ್ರಗೀತೆ ಕಿವಿಯಲ್ಲಿ ಗುನುಗುಡುತ್ತಿದ್ದಂತೆ ಮನಸ್ಸಲ್ಲೇನೇನೋ ಪ್ರಶ್ನೆಗಳು ಮೂಡಲಾರಂಭಿಸಿದವು………. ಸಹಜವೇನೋ ಎಂಬಂತೆ, ತರಗತಿಯಲ್ಲಿ ನಮ್ಮ ಸಮಾಜಶಾಸ್ತ್ರ ಉಪನ್ಯಾಸಕರೊಬ್ಬರು ಹೇಳುತ್ತಿದ್ದ ಮಾತೂ ನೆನಪಿಗೆ ಬಂತು, ಅದೇನು ಅನ್ನುವ ಕುತೂಹಲ ಖಂಡಿತ ಇದ್ದೇ ಇರುತ್ತದೆ ಬಿಡಿ. ಆದರೆ ಅದನ್ನು ತಿಳಿದುಕೊಳ್ಳುವುದಕ್ಕೆ ಮೊದಲು ಸ್ವಲ್ಪ ಗಂಭೀರ ಎನಿಸಿಕೊಳ್ಳಬಹುದಾದ ವಿಚಾರವೂ ಇದೆ….ಹದಿಹರಯ ಮನುಷ್ಯನನ್ನು ಯಾವ ಕಡೆಗೂ ಒಯ್ಯಬಹುದಲ್ಲವೆ? ಹೌದು ಎಂದು ಮನಸ್ಸಿಲ್ಲದೆಯೂ ಒಪ್ಪಿಕೊಳ್ಳಲೇಬೇಕು…. ಯಾಕಪ್ಪಾ ಇದೆಲ್ಲ ಪೀಠಿಕೆ ಅಂತ ನೀವಂದುಕೊಂಡರೂ ಪರವಾಗಿಲ್ಲ….. ನಾನು ಹೇಳಬೇಕಾದದ್ದನ್ನಂತೂ ಹೇಳಲೇಬೇಕು….
ಇತ್ತೀಚೆಗೆ ಒಮ್ಮೆ ತರಗತಿಯಲ್ಲಿ ನನ್ನ ಅದ್ಯಾಪಕರಂತೆ ನಾನೂ  ಪಾಠ ಮಾಡುತ್ತಿದ್ದಾಗ ಹೇಳಿದೆ, ನೋಡಿ ಮಕ್ಕಳೇ ಜೀವನ ಅನ್ನೋದು ನಾವಂದುಕೊಂಡ ಹಾಗೆ ಇರೋದಿಲ್ಲ… ಅಲ್ಲದೆಷ್ಟೋ ಕಷ್ಟಗಳು ನೋವುಗಳು ಬರುತ್ತವೆ……. ಎಲ್ಲವನ್ನೂ ಸರಿದೂಗಿಸಿಕೊಂಡು ನಾವು ಬದುಕಬೇಕಾಗಿದೆ…. ಸುಖವೇ ಬದುಕು ಅಂತ ನೀವಂದುಕೊಂಡಿದ್ದರೆ ಅದು ಸಿನಿಮಾದಲ್ಲಿ ಮಾತ್ರ.. ಅದೇ ರೀತಿ ಸಿನಿಮಾ ಯಾವತ್ತಿದ್ದರೂ ವಾಸ್ತವಕ್ಕೆ ದೂರದ ವಿಷಯ…. ಹೀಗೆ ಏನೇನೋ ವಿಚಾರಗಳು …….. ಮಾತು ಮುಂದುವರೆದು ಪ್ರೀತಿ ಪ್ರೇಮ ಅಂತ ನಿಮ್ಮ ಜೀವನವನ್ನು ಹಾಳು ಮಾಡಿಕೊಂಡು ಕೊನೆಗೆ ಪೇಚಿಗೆ ಸಿಲುಕಿಕೊಳ್ಳಬೇಡಿ ಅನ್ನುತ್ತಿದ್ದಂತೆ ಒಬ್ಬ ಹುಡುಗ ಎದ್ದು ನಿಂತು ಮೇಡಂ ಹಾಗದ್ರೆ ಪ್ರೀತಿ ಮಾಡೋದೇ ತಪ್ಪಾ? ಅಂದ……. ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ……….. ಹಾಡು ನೆನಪಾಗಿ ಒಂದು ಕ್ಷಣ ಯೋಚಿಸಿದೆ ಈಗ ಏನೆಂದು ನಾ ಹೇಳಲಿ……….
ಹೌದಲ್ವಾ!!!!!! ಪ್ರೀತಿ ಮಾಡೋದು ತಪ್ಪೇ? ಖಂಡಿತ ಅಲ್ಲ….. ಆದ್ರೆ ಎಲ್ಲಿ? ಯಾವಾಗ? ಹೇಗೆ? ಯಾವುದು ನಿಜವಾದ ಪ್ರೀತಿ? ಯಾವುದು ಆಕರ್ಷಣೆ? ಎಲ್ಲವೂ ಯೋಚಿಸಲೇ ಬೇಕಲ್ಲವೆ? ತಬ್ಬಿಕೊಂಡು ಮುತ್ತಿಟ್ಟ ಮಾತ್ರಕ್ಕೆ ಅದೇ ಪ್ರೀತಿ ಅಂದುಕೊಳ್ಳುವ ವಯಸ್ಸಿಗೆ ನಾವೇನಂದರೂ ತೆಗೆದುಕೊಳ್ಳುವ ಮನಸ್ಸಾದರೂ ಎಲ್ಲಿಂದ ಬಂದೀತು ಅಲ್ಲವೆ? ಹಾಗಂತೆ ಗೊತ್ತಿದ್ದೂ ಗೊತ್ತಿದ್ದೂ ಎಳೆಯ ಮನಸ್ಸುಗಳು ದಾರಿತಪ್ಪಿದರೆ ನೋಡಿ ಸುಮ್ಮನೆ ಸಂತೋಷ ಪಡುವಷ್ಟು ವಿಕೃತ ಮನಸ್ಸು ನನ್ನದಲ್ಲದ್ದರಿಂದಲೋ ಏನೋ ನಾನು ನೀನೀ ವಯಸ್ಸಿಗೆ ಪ್ರೀತಿಯ ಕಲ್ಪನೆ ಮಾಡಿಕೊಂಡರೂ ಅದು ತಪ್ಪೇ……. ಎಂಬುದಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದೆನಾದರೂ ನನ್ನ ಮನಸ್ಸು ಒಳಗೊಳಗೇ ನನ್ನನ್ನು ಮತ್ತೊಮ್ಮೆ ಪ್ರಶ್ನಿಸಿತು ಪ್ರೀತಿ ಮಾಡೋದು ತಪ್ಪೇ ಹೌದು ಎಂದಾದರೂ ತಪ್ಪು ಮಾಡದವ್ರು ಯಾರವ್ರೇ……… ತಪ್ಪೇ ಮಾಡದವ್ರು ಎಲ್ಲವ್ರೇ……… ಅಲ್ಲವೆ? ಆದರೆ ಅದರ ಜೊತೆಗೆ ನೆನಪಿಗೆ ಬಂದದ್ದು ಪ್ರೀತಿ ನೀನಿಲ್ಲದೆ ನಾ ಹೇಗಿರಲಿ…….. ಅನ್ನುವ ಹಾಡು….. ಎಲ್ಲಿ ಜಾರಿತೋ ಮನವು………… ಎಲ್ಲೆ ಮೀರಿತೋ ಕವಿ ಹಾಡಿದ್ದು ಇದನ್ನೇ ಅಲ್ಲವೇ………



Sunday, January 20, 2013


ಅಯ್ಯೋ ಸ್ವಾಮಿ ನೀವ್ಯಾಕೆ ಹೀಗೆ? ಅಲ್ಲಲ್ಲ ನಾವ್ಯಾಕೆ ಹೀಗೆ?


ನಾವು ಯಾವಾಗ್ಲೂ ಯೋಚಿಸುವುದು ಇನ್ನೊಬ್ಬರ ಬಗೆಗೆ ಮಾತ್ರ… ! ದಿನ ಪೂರ್ತಿ ಹರಟುವ ಚಾಳಿ ಇರುವವರೂ ಸಮಯ ಸಿಕ್ಕಾಗಲೆಲ್ಲ ಮಾತನಾಡುವುದು ಇನ್ನೊಬ್ಬರ ಬಗೆಗೆ ಮಾತ್ರ…. ಎಂದಾದರೂ ನನ್ನ ಹಾಗೆಯೆ ನೀವೂ ಕೂಡಾ ಗಮನಿಸಿರಬಹುದು ಅಂದುಕೊಂಡಿದ್ದೇನೆ……….! ಕುಂಬಳ ಕಾಯಿ ಕಳ್ಳ ಅಂದ ಕೂಡಲೇ ಹೆಗಲಿಮುಟ್ಟಿಕೊಂಡ ಎನ್ನುವ ಹಾಗಿದೆ ನಮ್ಮ ಪರಿಸ್ಥಿತಿ. ! ಯಾರು ಯಾರೋ ಮಾಡಿದ ಪಾಪದ ಬಗ್ಗೆ ಯೋಚಿಸುತ್ತೇವೆ, ಕೊರಗುತ್ತೇವೆ, ನಾವು ಮಾಡುವುದೇನು, ಮಾಡಿದ್ದೇನು, ಮಾಡಬೇಕಾಗುವುದೇನು ಎಂದಾದರೂ ಯೊಚಿಸಿದ್ದಿದೆಯೆ?………..

ಅದ್ಯಾವುದೋ ಸಿನಿಮಾ ನಟನ ಕುಟುಂಬದಲ್ಲಿ ಬಿರುಕುಂಟಾಗಿದೆ ಎಂದಾಗ ದಿನ ಇಡೀ ಬೇರೆ ಬೇರೆ ಚಾನೆಲ್ ಗಳಲ್ಲಿ ಚರ್ಚೆ ನಡೆಯುತ್ತದೆ, ಪೇಪರಿನ ಮುಖಪುಟದಲ್ಲೆ ದಪ್ಪ ಅಕ್ಷರದಲ್ಲಿ ಪುಟಗಟ್ಟಲೆ ಬರೆಯುತ್ತೇವೆ, ದಿನ ಪೂರ್ತಿ ಚಾನೆಲ್ ಮುಂದೆ ಕುಳಿತು ಭೂಮಿಯೆ ಮುಳುಗಿದ ಹಾಗೆ, ಆಕಾಶವೇ ತಲೆಮೇಲೆ ಬಿದ್ದ ಹಾಗೆ ಮರುಗುತ್ತೇವೆ…….ಆದರೆ ನಮ್ಮ ಮನೆಯ ಬಗ್ಗೆ, ನಮ್ಮ ನೆರೆಹೊರೆಯಲ್ಲೇ ನಡೆಯುವ ಹಲವಾರು ಕುಟುಂಬಗಳ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿದ್ದು ಎಂದಾದರೂ ಇದೆಯೆ? ಹುಚ್ಚರು ನಾವು………… ಮನೆಯ ಮುಂದೆ ನಡೆಯುವ ಅಚಾತುರ್ಯಗಳು ಕಂಡೂ ಕಾಣದಂತಹ ಕುರುಡರು ನಾವು; ಅದ್ಯಾವುದೋ ಊರಲ್ಲಿ ನಡೆದ ಸಣ್ಣ ವಿಷಯ ಗಂಭೀರವಾಗಿ ಕಂಡಿದೆ ನಮಗೆ!!!!!!!

ಇತ್ತೀಚೆಗೆ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಲ್ಲಿ ಕೇಳಿದ್ದೆ ದೆಹಲಿಯ ರೇಪ್ ಬಗ್ಗೆ ನಿಮಗೇನನ್ನಿಸಿದೆ? ಕೆಲವು ಧ್ವನಿಗಳು ಕೇಳಿದ್ದು ಹೀಗೆ: ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈಗೆ ಈ ಶಿಕ್ಷೆ!!!!!!!!  ನಾವು ಮೆರವಣಿಗೆ ಹೋಗುವುದಿಲ್ಲ, ಅದ್ರಿಂದ ನಮಗೆನು ಲಾಭ? ಹೇಗೆ ನಾನಾ ತರಹೇವಾರಿ ಉತ್ತರಗಳು!!!!!!! ಇನ್ನೂ ಮುಂದುವರಿದು ನಮ್ಮ ಮನೆಯವರಲ್ಲಿ ಯಾರಾದರೂ ಈ ಸ್ಥಿತಿ ತಲುಪಿದಾಗಲೂ ಹಾಗೆಯೇ ಯೋಚಿಸುವುದು ಸಾಧ್ಯವೆ? ನೆರೆಮನೆಗೆ ತಗುಲಿದ ಬೆಂಕಿಯ ಕಿಡಿ ನಮ್ಮಲ್ಲಿಗೂ ತಲುಪದಿದ್ದೀತೆ? ನಾವೇಕೆ ಇಷ್ಟೂ ಕುಬ್ಜರಾಗುತ್ತಿದ್ದೇವೆ? ನಾವೆಷ್ಟು ಸ್ವಾರ್ಥಿಗಳು! ಅದೆಷ್ಟೋ ಸಲ ನಾನು ನನ್ನನ್ನೇ ಕೇಳಿಕೊಳ್ಳುವುದಿದೆ…!

ಸಮಾಜದ ಒಳಿತು ಕೆಡುಕುಗಳಿಗೆ ಸ್ಪಂದಿಸಬೇಕಾದ ಮಾಧ್ಯಮಗಳು ಒಬ್ಬೊಬ್ಬರ ವೈಯುಕ್ತಿಕ ವಿಚಾರಗಳಿಗೆ ಮಣೆ ಹಾಕುತ್ತಿವೆ ಎಂದರೆ ಅದಕ್ಕಿಂತ ಹೆಚ್ಚಿನ ಅವಮಾನ ನಮಗೆ ಇನ್ನೊಂದಿದೆಯೆ? ಇದೂ ಪ್ರಜಾಪ್ರಭುತ್ವವೆ? ಬೇಲಿಯೆ ಎದ್ದು ಹೊಲ ಮೇದಂತೆ ಅಲ್ಲವೇ? ಕೇವಲ ನಾಲ್ಕು ಗೋಡೆಗಳ ನಡುವೆ ನಡೆಯ ಬೇಕಾದ ದೃಶ್ಯಗಳು ದಿನ ಪೂರ್ತಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲಿರುತ್ತವೆ, ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಒಬ್ಬ  ಸುಲಭವಾಗಿ ಹೇಗೆ ತಪ್ಪಿಸಿಕೊಳ್ಳಬಹುದೆನ್ನುವ ಪರಿಹಾರೋಪಾಯಗಳು ಅಲ್ಲೇ ಕಾಣಸಿಗುತ್ತವೆ ಎಂದಾದ ಮೇಲೆ ಯಾವುದುಂಟು ಯಾವುದಿಲ್ಲ ನೀವೇ ಹೇಳಿ!!!!!!!!!!!!

 ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗಬಲ್ಲ ಮಾಧ್ಯಮಗಳು ಇಂದು ಅದನ್ನು ಮೊಟಕುಗೊಳಿಸುವಲ್ಲೂ ಕಾರಣೀಭೂತವಾಗಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ… ತಮ್ಮ ಪ್ರಚಾರಕ್ಕೋಸ್ಕರ ಮಾಧ್ಯಮಗಳು ಕಂಡುಕೊಂಡ ಮಾರ್ಗಗಳನ್ನೊಮ್ಮೆ ಅವಲೋಕಿಸಿದರೆ ಅಸಹ್ಯವೆಸುತ್ತದೆ…..!  ನಮ್ಮಲ್ಲಿನ ಹುಳುಕುಗಳನ್ನು ಮುಚ್ಚುವುದಕ್ಕೋಸ್ಕರ ಇನ್ನೊಬ್ಬರನ್ನು ಬೊಟ್ಟು ಮಾಡುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವೊಮ್ಮೆ ಬೇಸರವಾಗುತ್ತದೆ: ರೋಷ ಉಕ್ಕುತ್ತದೆ……. ಆಗಲೂ ಅಂದುಕೊಳ್ಳುತ್ತೇನೆ ನಾವೆಷ್ಟು ಅಸಹಾಯಕರು!!!!!!!!!!!!!!???????

ಲೋಕದ ಡೊಂಕ ನೀವೇಕೆ ತಿದ್ದುವಿರಿ… ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ… ದಾಸರವಾಣಿ ನಮ್ಮ ಮನದಾಳಕ್ಕೆ ಮುಟ್ಟಿ ನಾವೆಚ್ಚೆತ್ತುಕೊಂಡು ಸ್ವಲ್ಪ ಮಟ್ಟಿಗಾದರೂ ನಮ್ಮನ್ನು ನಾವೇ ತಿದ್ದಿಕೊಂಡು ಲೋಕಕಲ್ಯಾಣಕ್ಕೆ ಕಿರು ಕಾಣಿಕೆಯನ್ನಾದರೂ ಸಲ್ಲಿಸುವ ಮನೋಭಾವ ನಮ್ಮೆಲ್ಲರಲ್ಲಿ ಬೆಳೆಯಲಿ ಎಂದು ಆಶಿಸೋಣವಲ್ಲವೆ?