Thursday, December 15, 2011

ಬದಲಾವಣೆಗಳೊಂದಿಗೆ ಬದಲಾಗಬೇಕಾದ ಹೆಣ್ಣು

ಇಂದುಗಳು ನಾಳೆಗಳು ಹಿಂದೆ ಹಿಂದೋಡುವವು ತುದಿಮೊದಲ ಹೊಂದಿರದ ಅನಂತತೆಯಕಡೆಗೆ............ಇದು
"
ಕವಿವಾಣಿ, ಉರುಳುತ್ತಿರುವ ಕಾಲಚಕ್ರದ ಜೊತೆಗೆ ಜಾಗತಿಕಮಟ್ಟದಲ್ಲಿ ಆದ ವ್ಯತ್ಯಾಸಗಳೊಂದಿಗೆ ನಮ್ಮಲ್ಲಿನ ಎಲ್ಲಾ ವ್ಯವಸ್ಥೆಗಳೂ ಬದಲಾಗುತ್ತಿವೆ. ಇದು ಪ್ರಕೃತಿಸಹಜವಾದ ಪ್ರಕ್ರಿಯೆ ಎಂದರೂ ಅದರೊಂದಿಗೆ ಮಾನವರೂ ಅವರ ಆಲೋಚನೆಗಳೂ ಬಹಳಷ್ಟು ಮಟ್ಟಿಗೆ ಬದಲಾವಣೆಯನ್ನು ಕಂಡಿದೆ. ಇವೆಲ್ಲದರೊಂದಿಗೆ ನಾಲ್ಕು ಗೋಡೆಗಳ ನಡುವಿಗೇ ಸೀಮಿತವಾಗಿದ್ದ ಮಹಿಳೆಯ ಬದುಕೂ ಬೇರೆಬೇರೆ ಆಯಾಮಗಳಲ್ಲಿ ಅಭಿವೃದ್ದಿಯನ್ನು ಕಂಡಿದೆ ತನ್ನ ಬದುಕಿನ ಬೇಕು ಬೇಡಗಳನ್ನು ಸರಿಯಾದ ರೀತಿಯಲ್ಲಿ ತುಲನೆಮಾಡಬಲ್ಲ, ಸರಿತಪ್ಪುಗಳನ್ನು ವಿಮರ್ಶಿಸಬಲ್ಲ ಸಾಮರ್ಥ್ಯವನ್ನು ಆಕೆ ಬೆಳೆಸಿಕೊಂಡಿದ್ದಾಳೆ. ಒಂದುಕಾಲದಲ್ಲಿ ಇಡೀ ಕುಟುಂಬಕ್ಕೆ ಹೊರೆಯೆಂದೇ ನೋಡಲಾಗುತ್ತಿದ್ದ ಹೆಣ್ಣು, ಇಂದು ಇಡೀ ಕುಟುಂಬದ ಜವಾಬ್ಧಾರಿಯನ್ನು ಸಮರ್ಥವಾಗಿ ಹೊರಬಲ್ಲ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ ಎಂಬುದು ಗಮನಾರ್ಹ ಸಂಗತಿ.ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಃ" ಅಂದರೆ ಎಲ್ಲಿ ನಾರಿಯನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೋ, ಅಲ್ಲಿ ದೇವತೆಗಳ ಸಾಕ್ಷಾತ್ಕಾರವಿರುತ್ತದೆಯೆಂಬ ಆರ್ಯೋಕ್ತಿ, ಭಾರತದ ಸಂಸ್ಕೃತಿಯ ಪ್ರತೀಕ. ಭೂಮಿಯನ್ನು ಕೂಡಾ ಹೆಣ್ಣಿಗೆ ಹೋಲಿಸಲಾಗುತ್ತದೆ, ಎಂದ ಮೇಲೆ ಹೆಣ್ಣನ್ನು ಅದೆಷ್ಟು ಪೂಜ್ಯನೀಯ ಭಾವದಿಂದ ನೋಡುವ ಸಂಸ್ಕೃತಿ ನಮ್ಮದು ಎಂಬುವುದು ವೇದ್ಯವಾಗದಿರದು. ಅಂತೆಯೇ ಮನುಸ್ಮ್ರುತಿಯಲ್ಲಿ ಹೇಳಿದಹಾಗೆ ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಆಕೆ ಬಾಲ್ಯದಲ್ಲಿ ತಂದೆಯ, ಯವ್ವನದಲ್ಲಿ ಗಂಡನ, ವೃದ್ದಾಪ್ಯದಲ್ಲಿ ಮಕ್ಕಳ ಕೈಕೆಳಗೇ ಇರಬೇಕು, ಎಂಬಮಾತು ಒಂದರ್ಥದಲ್ಲಿ ಸ್ತ್ರೀಯ ರಕ್ಷಣೆಯ ದೃಷ್ಟಿಯಿಂದಲೇ ಎನ್ನಬಹುದಾದರೂ, ಇನ್ನೊಂದುಕಡೆ ಆಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವತಂತ್ರ ಎಂಬುದಾಗಿಯೂ ವಾದಗಳಿವೆ. ಪುರುಷ ಪ್ರಧಾನ ಸಮಾಜವೆಂದೇ ಕರೆಯಲ್ಪಡುವ ನಮ್ಮ ಸಮಾಜ ಸ್ತ್ರೀ ಸ್ವಾತಂತ್ರ್ಯವನ್ನು ಸುತಾರಾಂ ಒಪ್ಪಲಾರದು ಎಂಬುದು ಕಹಿ ಸತ್ಯ. ಮತ್ತೆ ಸ್ವಲ್ಪ ಹಿಂದಕ್ಕೆ ದೃಷ್ಟಿ ಹಾಯಿಸಿದರೆ ಜವಾಬ್ಧಾರಿಯ ದೃಷ್ಟಿಯಿಂದಲೋ, ವರದಕ್ಷಿಣೆ ಎಂಬ ಮಹಾಮಾರಿ ಪಿಡುಗಿನಿಂದಾಗಿಯೋ ಹೆಣ್ಣುಮಗು ಹುಟ್ಟಿದೆಯೆಂದರೆ ಮುಖ ಸಿಂಡರಿಸಿಕೊಂಡೋ, ಮುಖ ಸಪ್ಪಗೆ ಮಾಡಿಕೊಂಡೋ, ಹೆಣ್ಣು ಹೆತ್ತ ತಾಯಿಯನ್ನು ಹೀಗಳೆಯುತ್ತಲೋ ಹೋಗುವವರ ಸಂಖ್ಯೆಯೇ ಹೆಚ್ಚಾಗಿತ್ತು. ಗಂಡು ಹೆಣ್ಣಿನ ತಾರತಮ್ಯಕ್ಕೆ ಪಾರವೇ ಇರಲಿಲ್ಲ. ಇವನ್ನೆಲ್ಲ ಗಮನಿಸಿಯೇ ಇರಬೇಕು ಕವಯತ್ರಿ "ಸಂಚಿ ಹೊನ್ನಮ್ಮ" " ಹೆಣ್ಣುಹೆಣ್ಣೆಂದೇಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು" ಎಂದಿರುವುದು. ಇದಕ್ಕೆ ಹೋಲಿಕೆಯೆಂಬಂತೆ "ಹೆಣ್ಣಿನ ಮಾತು ಮೊಣಕಾಲಿಂದ ಕೆಳಗೆ" ಅನ್ನುವ ಗಾದೆಯೂ ಇದೆ. ಇವೆಲ್ಲವೂ ಹೆಣ್ಣಿನ ಅಸ್ಥಿತ್ವಕ್ಕೆ ಅದೆಷ್ಟು ಸವಾಲುಗಳಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುವ ವಿಚಾರಗಳು.ಹೆಣ್ಣು ಗಂಡಿನ ನಡುವಿನ ತಾರತಮ್ಯ ಅಂದಿನಂತೆ ಇಂದಿಗೂ ಇದೆ, ಆದರೆ ಹೋಲಿಸಿ ನೋಡಿದರೆ ಅಂದಿನ ಮತ್ತು ಇಂದಿನ ತರತಮತೆಗೆ ಅಜಗಜಾಂತರ ವ್ಯತ್ಯಾಸವಿದೆ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಕೆಯನ್ನು ನಿರ್ಲಕ್ಷಿಸುತ್ತಿದ್ದ ಕಾಲ ಒಂದಾದರೆ, ಇಂದು ಆಕೆ ಇತ್ತ ಕಡೆಗೂ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿದ್ದಾಳೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ, ಹೀಗೆ ಎಲ್ಲಾ ರಂಗಗಳಲ್ಲೂ ತನ್ನ ಇರವನ್ನು ಸಾಬೀತುಪಡಿಸುವುದರೊಂದಿಗೆ ತನ್ನ ಶಕ್ತಿಯನ್ನು ಪ್ರದರ್ಷಿಸಿದ್ದಾಳೆ. ಮನೆಯ ನಾಲ್ಕು ಗೋಡೆಗಳೊಳಗೆ ಬೆಚ್ಚನೆಯ ಹಾಸಿನೊಳಗೆ ಅವಿತಿದ್ದ ಹೆಣ್ಣು ದಿಟ್ಟತನದಿಂದ ಆಕಾಶದೆಡೆಗೆ ಲಗ್ಗೆ ಇಟ್ಟಿದ್ದಾಳೆ.ವಿದ್ಯಾಭ್ಯಾಸ ಕ್ಷೇತ್ರವನ್ನೊಮ್ಮೆ ಅವಲೋಕಿಸಿದರೆ ಅಲ್ಲೂ ಮುಂಚೂಣಿಯಲ್ಲಿರುವವರು ಹೆಣ್ಣು ಮಕ್ಕಳೇ ಆಗಿದ್ದು ನಾವೂ ಸಮರ್ಥರು ಎಂದು ಸಾಬೀತುಪಡಿಸಿಕೊಂಡಿದ್ದಾಳೆ. ಆರ್ಥಿಕ ಕ್ಷೇತ್ರದಲ್ಲಾದರೋ ಹೆಚ್ಚುಕಡಿಮೆ ೫೦% ಮಹಿಳೆಯರು ತಮ್ಮ ಪಾಲ್ಗೊಳ್ಳುವಿಕೆಯನ್ನು ತೋರಿಸಿಕೊಟ್ಟಿದ್ದಾರೆ. ರಾಜಕೀಯದಲ್ಲೂ ಹೆಚ್ಚುಕಡಿಮೆ ೧೦% ಪಾಲ್ಗೊಳ್ಳುವಿಕೆಯನ್ನು ಗಮನಿಸಬಹುದು. ವಿಜ್ಞಾನ,ಕ್ರೀಡೆಗಳಲ್ಲೂ ಸ್ತ್ರೀಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲೂ ಗಂಡಿಗಿಂತ ನಾವೇನು ಕಡಿಮೆ ಎಂಬುದಾಗಿ ಸವಾಲು ಹಾಕುವಷ್ಟರ ಮಟ್ಟಿಗೆ ಮುಂದುವರೆದಿದ್ದಾಳೆ ಎಂಬುದು ನಿಜಕ್ಕೂ ಗಮನಾರ್ಹ ಸಂಗತಿ.ಆದರೆ...... ಎಲ್ಲ ವಿಷಯಗಳೊಂದಿಗೆ ನಾವು ಗಮನಿಸಿಕೊಳ್ಳಬೇಕಾದ, ಕಾಳಜಿವಹಿಸಬೇಕಾದ ಕೆಲವು ಅಂಶಗಳನ್ನು ನಾವು ಮರೆತಿದ್ದೇವೆಯೇ? ಸ್ವಾತಂತ್ರ್ಯವನ್ನು ಪಡೆದುಕೊಳ್ಳುವ ನೆಪದಲ್ಲಿಯೋ ಅಥವಾ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವನೆಪದಲ್ಲೋ ನಾವು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯಬೇಕೇ? ಆರ್ಥಿಕ ಸ್ವಾತಂತ್ರ್ಯದಿಂದಾಗಿ ತನ್ನ ಜೀವನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವ ಸ್ವಾತಂತ್ರ್ಯ ಸ್ತ್ರೀಗೆ ಲಭಿಸಿದೆ, ಅಥವಾ ಆಕೆ ಪಡೆದುಕೊಂಡಿದ್ದಾಳೆ. ನಂತರದ ಜೀವನದ ಅಗತ್ಯತೆಗಳನ್ನು ಆಗುಹೋಗುಗಳನ್ನು ಆಲೋಚಿಸುವ ಸಾಮರ್ಥ್ಯ ಇದೆಯಾದರೂ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಹೆಣ್ಣುಸಹನಾಮಯಿ ಎಂಬುದಾಗಿ ಹೇಳಿದ್ದಕ್ಕೆ ಅಪವಾದವೇನೋ ಎಂಬ ಸಂಶಯ ಇಂದಿಗೆ ಕಾಡತೊಡಗಿದೆ. ಎಷ್ಟೋ ಕುಟುಂಬಗಳು ದಿಕ್ಕು ತಪ್ಪಲು, ಬೀದಿಪಾಲಾಗಲು ಹೆಣ್ಣೇ ಕಾರಣವಾಗಿದ್ದಾಳೆ. ಹಾಗೆಂದಮಾತ್ರಕ್ಕೆ ಒಬ್ಬ ಪುರುಷನ ಸರ್ವತೋಮುಖ ಬೆಳವಣಿಗೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂಬ ಮಾತೂ ಸುಳ್ಳಾಗಲಾರದು.ಎಷ್ಟೇ ಮುಂದುವರಿದರೂ ಸ್ವತಂತ್ರಳು ಎಂದೆನಿಸಿಕೊಂಡರೂ, ಪ್ರಕೃತಿದತ್ತವಾದ ದೈಹಿಕ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಹೆಣ್ಣಿಗಿದೆ. ಯಾವುದೇ ರೀತಿಯಲ್ಲೇ ಆದರೂ ಆದ ಆಘಾತಗಳನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯ ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಆಕೆಗಿಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ಕಠೋರ ಸತ್ಯ ಸಬಲೆ ಎಂಬುದಾಗಿ ಎಲ್ಲಾ ಆಯಾಮಗಳಲ್ಲೂ ಒಪ್ಪಿಕೊಂಡರೂ ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಯೋಚಿಸಿ ಮುಂದಡಿಯಿಡಬೇಕಾಗುತ್ತದೆ. ಹೀಗೆ ಯೋಚಿಸಹೊರಟಾಗ ಎದುರಾಗುವ ಪ್ರಶ್ನೆಯೆಂದರೆ ಹೆಣ್ಣು ಗಂಡಿನಂತೆ ಯಾವುದೇ ಸಮಯದಲ್ಲೂ ಹೊರಗಡೆ ಓಡಾಡಲು ಸಾಧ್ಯವಿದೆಯೇ? ಅಥವಾ ಓಡಾಡಹೊರಟ ಹೆಣ್ಣನ್ನು ಸಮಾಜ ಯಾವದೃಷ್ಟಿಯಿಂದ ನೋಡೀತು? ಸಂದರ್ಭದಲ್ಲಿ ನಾನು ಸಬಲೆ, ಏನುಬೇಕಾದರೂ ಮಾಡಬಹುದು ಎಂದುಕೊಂಡರಾದೀತೇ? ಎಲ್ಲಾಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದ ಹೆಣ್ಣು ಮನೆ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲಳು ಎಲ್ಲವೂ ಸತ್ಯವೇ, ಆದರೆ ನಾನು ಸಬಲೆಯೆಂಬ ಗರ್ವದಿಂದ ಅಹಂಭಾವದಿಂದ ಹೊಂದಾಣಿಕೆಯನ್ನು ಮರೆತರೆ? ಮುಂದೇನಾದೀತು ಎಂಬ ಆಲೋಚನೆಯೇ ಇಲ್ಲದೆ ಬದುಕನ್ನು ನೀರುಪಾಲು ಮಾಡಬೇಕಾದ ದಿನಗಳು ದೂರವಿರಲಿಕ್ಕಿಲ್ಲ. ಮನೆ,ಮನೆಯಲ್ಲಿರುವ ಹಿರಿಯರು, ಮನೆಮಕ್ಕಳು, ಎಲ್ಲರೂ ನಂಬಿದ ಸಹನಾಮಯಿ ಹೆಣ್ಣು - ಹೆಮ್ಮಾರಿಯಾದರೆ? ಊಹಿಸಲಸಾಧ್ಯವಾದಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸದಿರಲಾರದು.ಇವೆಲ್ಲವನ್ನೂ ಅವಲೋಕಿಸಿದಾಗ ನೆನಪಿಗೆ ಬರುವುದು ಇತ್ತೀಚಿನ ಸ್ತ್ರೀ ಸಬಲೀಕರಣದ ಕಲ್ಪನೆಯಲ್ಲಿರುವ ಉಡುಗೆ ತೊಡುಗೆಗಳು. ಒಬ್ಬವ್ಯಕ್ತಿಯ ಮನೋಧರ್ಮವನ್ನು ಅಳೆಯುವುದಕ್ಕೆ ಉಡುಗೆಯನ್ನು ಮಾನದಂಡವಾಗಿರಿಸಿಕೊಂಡರೆ ಅದು ಸರಿಯಲ್ಲ. ಸ್ತ್ರೀವಾದ ಎಂದೊಡನೆ ಮೈಗಂಟುವ ಅರೆಬಟ್ಟೆ ತೊಟ್ಟು ಗಂಡಸರ ವಿರುದ್ದ ವಾದಿಸುವುದು ಎಂಬಕಲ್ಪನೆ ಎಲ್ಲರ ಮನಸ್ಸಲ್ಲೂ ಬೇರೂರಿಬಿಟ್ಟಿದೆ. ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಅವರ ಉಡುಗೆ-ತೊಡುಗೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಸಂಧರ್ಭಕ್ಕನುಗುಣವಾದ ಉಡುಗೆಗಳನ್ನು ಬಳಸುವುದು ತಪ್ಪಲ್ಲ. ಗಡಿಬಿಡಿಯಲ್ಲಿ ಓಡುವ ಓಟಕ್ಕೆ ಸೀರೆ ಸರಿಬರುವುದಿಲ್ಲ, ಹಾಗೆಂದು ದೇವಾಲಯಗಳಿಗೆ ಭೇಟಿಕೊಡುವ ಸಂಧರ್ಭದಲ್ಲೋ, ಯಾವುದೇ ಸಮಾರಂಭಗಳಿಗೋ ಸೀರೆಯನ್ನು ಹೊರತುಪಡಿಸಿದ ಉಡುಗೆಗಳು ಸೇರಿಬರಲಾರದು. ಇದು ನಮ್ಮ ಸಂಸ್ಕೃತಿ, ಸಂಸ್ಕಾರ. ಮಹಿಳೆ ಆಧುನಿಕ ಚಿಂತನೆಗಳಿಗೆ ಒಗ್ಗಿಕೊಂಡಿದ್ದಾಳೆ, ಮುಂದುವರಿದಿದ್ದಾಳೆ, ಪ್ರಗತಿ ಪಥದಲ್ಲಿ ಸಾಗುತ್ತಿದ್ದಾಳೆ ಎಂದು ತೋರಿಸಿಕೊಳ್ಳುವುದಕ್ಕೆ, ಉಡುಗೆಗಳೇ ದಾರಿ ಖಂಡಿತವಾಗಿಯೂ ಅಲ್ಲ ಎಂಬುದನ್ನು ಅರಿತುಕೊಳ್ಳಲೇ ಬೇಕಾದ ಅನಿವಾರ್ಯ ಇಂದು ನಮ್ಮೆದುರಿಗಿದೆ. ನಮ್ಮ ನಮ್ಮ ಬದುಕಿನ ಒಳಿತು ಕೆಡುಕುಗಳಿಗೆ ನಾವೇಕಾರಣ ಎಂಬ ಕಠೋರ ಸತ್ಯವನ್ನು ಅರಿತು, ಬೇಕು ಬೇಡಗಳನ್ನು ಸರಿದೂಗಿಸಿಕೊಳ್ಳಬಲ್ಲ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ. ಅದೆಷ್ಟೋ ರೀತಿಯಲ್ಲಿ ದೌರ್ಜನ್ಯ ಅತ್ಯಾಚಾರ, ಅನಾಚಾರಗಳು ನಡೆಯುತ್ತವೆ ಎಂದರೆ ಅದರಲ್ಲಿ ಸಮಪಾಲು ಮಹಿಳೆಯರದ್ದೂ ಇದೆಯೆಂಬುದು ನಿಷ್ಟುರದ ಮಾತಾದರೂ ಸತ್ಯ. ನಮ್ಮ ನಡತೆಗಳೋ, ಉಡುಗೆ-ತೊಡುಗೆಗಳೋ ಎಲ್ಲವೂ ಕಾರಣವಾಗುತ್ತವೆ. ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಗಗನ ಕುಸುಮವನ್ನು ತನ್ನ ಕೈಯಲ್ಲಾಗಿಸುವ ಪ್ರಯತ್ನಕ್ಕೆ ಇಳಿದು ಬದುಕು ಬರಡಾಗಿರುವ ಘಟನೆಗಳು ಒಂದಲ್ಲ ಎರಡಲ್ಲ ಸಾವಿರಾರು. ಅಧಿಕಾರ ಅಂತಸ್ತು, ಅಹಂಕಾರವನ್ನು ತರಿಸದೇ ನಯವಿನಯಗಳನ್ನು ರೂಢಿಸಿಕೊಂಡು ಬದುಕನ್ನು ಹಸನಾಗಿಸಿ ನಮ್ಮೊಂದಿಗೆ ಇತರರನ್ನೂ ಉತ್ತಮರಾಗಿಸುವ ಹೊಣೆ ಹೆಣ್ಣಿಗಿದೆ.ಎಷ್ಟೇ ಅಭಿವೃದ್ಧಿ ಹೊಂದಿದರೂ, ಮುಂದುವರೆಯುತ್ತಿರುವ ಸಮಾಜದೊಂದಿಗೆ, ಓಡುವ ದಿನಗಳೊಂದಿಗೆ ನಾವೂ ರಭಸದಿಂದಲೇ ಓಡಬೇಕಾಗಿದೆ ನಿಜ. ಆದರೆ ಓಟದ ಭರದಲ್ಲಿ ನಮ್ಮತನ ನಮ್ಮ ಸಂಸ್ಕೃತಿ, ನಮ್ಮಸಂಸ್ಕಾರಗಳನ್ನು ಮರೆಯಬೇಕಾದ ಅಗತ್ಯವೇನೂ ಇಲ್ಲವಲ್ಲ! ಕಾಲದ ಕವಿಗಳ ಕಲ್ಪನೆಯ ಹೆಣ್ಣು ಈಕಾಲದಲ್ಲೂ ಇರಬಹುದಲ್ಲವೇ, ಆಧುನಿಕತೆಯಲ್ಲೂ ಹೆಣ್ತನವನ್ನು ಉಳಿಸಿಕೊಂಡೇ ಬೆಳೆಯಬಲ್ಲ, ಸವಾಲುಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದಲ್ಲವೇ? ನಿಟ್ಟಿನಲ್ಲಿ ಸ್ವಲ್ಪಯೋಚಿಸೋಣ..............                                  

Monday, December 5, 2011

ನಂಗಂತೂ ಪುರುಸೊತ್ತಿಲ್ಲ..........................

ನಂಗಂತೂ ಪುರುಸೊತ್ತಿಲ್ಲ..........................
ಇದು ಮಾಮೂಲಿ ಸಂಗತಿ. ಮನುಷ್ಯ ಅಂತ ಅನ್ನಿಸ್ಕೊಂಡವರಿಗೆ ಯಾರಿಗೂ ಪುರುಸೋತ್ತೇ ಇಲ್ಲ........ ಆದ್ರೆ ಕೆಲಸ ಏನಿದೆ ಅಂದ್ರೆ ಅದಂತೂ ಗೊತ್ತೇ ಇಲ್ಲ. ಏನೇ ಕೇಳಿ ಏನೇ ಹೇಳಿ ಒಂದೇ ಉತ್ತರ ಹೇಯ್ ನಾ ತುಂಬಾ ಬ್ಯುಝಿ...... ಟೈಮ್ ಅನ್ನೋದೇ ಇಲ್ಲ..... ಉಂಡಾಡಿ ಗುಂಡ ಅನ್ನಿಸ್ಕೊಂಡವನಿಗೂ ಟೈಮ್ ಇಲ್ಲ. ರಾಷ್ಟ್ರದ ಪ್ರಧಾನಮಂತ್ರಿಗೂ ಟೈಮ್ ಇಲ್ಲ.... ಅದೇನೇ ಕೆಲಸ ಹೇಳಿ ನೋಡಿ ಒಂದೇ ಮಾತು ನಂಗಂತೂ ಟೈಮ್ ಇಲ್ಲಪ್ಪ... ಫ಼ುಲ್ಲ್ ಬ್ಯುಝಿ......
  ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಎಸ್ಎಮ್ಎಸ್ಸ್ ಓದಿ ನಾನು ಯಾವತ್ತಾದ್ರೂ ಬ್ಯುಝಿ ಅಂದಿದ್ದೆನೆನೋ ಅನ್ನಿಸ್ತು... ಯಾಕೆ ಅಂದ್ರೆ ಆ ಎಸ್ಸೆಮ್ಮೆಸ್ಸಿನ ತಾತ್ಪರ್ಯ " ಎಲ್ಲರಿಗೂ ಇರೋದು ೨೪ ಗಂಟೆಯೆ ಆಗಿರೋದ್ರಿಂದ ಸ್ವಾರ್ಥ ಮಾತ್ರ ನಮ್ಮನ್ನು ಬ್ಯುಝಿ ಅಂತ ಹೇಳಿಸುತ್ತದೆ" ಎಂಬುದಾಗಿತ್ತು..
 ಆಮೇಲೆ ಕುಳಿತು ಯೋಚಿಸುವಾಗ ನನಗೂ ಅದು ಅಹುದೆನಿಸಿತು... ನಮ್ಮ ಅಗತ್ಯಗಳಿಗೆ ಅರಿವಿಲ್ಲದೆಯೆ ಅದೆಷ್ಟೋ ಸಮಯವನ್ನು ವ್ಯಯಿಸುವುದಕ್ಕೆ ಸಿದ್ಧರಿರುವ ನಾವು ಇತರರಿಗೋಸ್ಕರ ಒಂದೇ ಒಂದು ನಿಮಿಷವನ್ನೂ ಕೊಡುವುದು ಸಾಧ್ಯವಿಲ್ಲ ಅನ್ನುವ ಮಟ್ಟದಲ್ಲಿ ಆಲೋಚಿಸುವವರು... ಇದು ಸ್ವಾರ್ಥ ಅಲ್ಲದೆ ಮತ್ತೇನು? ಮೊಬೈಲ್ ಹಿಡಿದು ಗಂಟೆಗಟ್ಟಲೆ ಪ್ರೇಮಿಸಿದವರೊಡನೆ ಹರಟುತ್ತಿದ್ದ ಹುಡುಗನಿಗೋ ಹುಡುಗಿಗೋ ಮದುವೆ ಆದ ಮೇಲೆ ಮನೆಯವರೊಡನೆ ಕಳೆಯುವುದಕ್ಕೆ ಸಮಯ ಸಿಗುವುದು ತುಂಬಾ ಕಡಿಮೆಯೇ.. ಗೆಳೆಯರೊಡನೆ ಊರೆಲ್ಲ ಅಲೆದಾಡುತ್ತಿದ್ದ ಪುಣ್ಯಾತ್ಮನಿಗೆ ತನ್ನ ಹೆಂಡತಿ ಹೊರಗಡೆ ಹೋಗೋಣ ಅಂದ್ರೆ ಟೈಮೇ ಇಲ್ಲ ಪಾಪ!!..
ನನಗೆ ಆಶ್ಚರ್ಯದ ಸಂಗತಿಯೆಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬನಿಗೂ ಇರುವುದು ಇಪ್ಪತ್ತನಾಲ್ಕೇ ಗಂಟೆ.... ಹೀಗಿದ್ದು ಕೆಲವರಿಗೆ ಮಾತ್ರ ಸಮಯ ಇಲ್ಲ..... ಶಾಲೆಗೆ ಹೋಗುವ ಮಕ್ಕಳಿಗೆ ಅದ್ಯಾಪಕರು ಹೇಳಿದ ಕೆಲಸ ಮಾಡಲು ಸಮಯ ಇಲ್ಲ, ವ್ಯಾಪಾರ ವ್ಯವಹಾರ ಮಾಡುವವರಿಗೆ ಟೈಂ ಇಲ್ಲ, ಮನೆಕೆಲಸ ಮಾಡುವ ಅಮ್ಮನಿಗಂತು ಟೈಂ ಅನ್ನೋದೇ ಇಲ್ಲ, ಆಫೀಸು ಕೆಲಸಕ್ಕೆ ಹೋಗುವ ಹೆಮ್ಮಕ್ಕಳಿಗೆ ಮನೆಕೆಲಸದೊಂದಿಗೆ ಉಳಿದಕೆಲಸಗಳನ್ನೂ ನಿಭಾಯಿಸುವರೇ ಟೈಂ ಇಲ್ಲ....ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಕಥೆ ಹೇಳುತ್ತಾ ಕಾಲ ಕಳೆಯುವ ಅಪ್ಪಮ್ಮ, ಅಪ್ಪಪ್ಪ, ಅಮ್ಮಮ್ಮ, ಅಮ್ಮಪ್ಪನವರಿಗೂ ( ಅಜ್ಜ, ಅಜ್ಜಿ) ಸಮಯವೇ ಸಿಗೋದಿಲ್ಲ........ ಹಾಗಂತ ಸಾಮಾನ್ಯ ಸಂಜೆ ಹೊತ್ತು ಮನೆಗಳ ಅಕ್ಕಪಕ್ಕ ಒಮ್ಮೆ ಕಣ್ಣು ಹಾಯಿಸಿದರೆ ಊರ ಪಟ್ಟಾಂಗ ಮಾಡುತ್ತಾ, ಹರಟುವವರ, ಅವರಿವರ ಸಂಗತಿಗಳಿಗೆ ಮೂಗು ತೂರಿಸುವ ಗೋಜಿಯಲ್ಲಿರುವವರಿಗೂ ಪಾಪ ಟೈಮ್ ಇಲ್ಲ ಸ್ವಾಮಿ.....!
ಇಲ್ಲದ ಟೈಂ ಜೊತೆಗೆ ಹೋರಾಟ ಮಾಡಿ ಸಾಧನೆಯನ್ನೇ ಬದುಕನ್ನಾಗಿಸಿದ ಜನರ ಪಟ್ಟಿಯನ್ನವಲೋಕಿಸಿದರೆ ಒಬ್ಬರೇ, ಇಬ್ಬರೇ.......... ಹಲವಾರು ಮಂದಿ.... ಅದೆಷ್ಟೋ ಕಾದಂಬರಿಗಳನ್ನು ಬರೆದ ಸಾಹಿತಿಗಳಿಗೆ, ಅದೇನೇನನ್ನೋ ಕಂಡು ಹಿಡಿದ ವಿಜ್ಞಾನಿಗಳಿಗೆ, ಅದೆಷ್ಟೋ ಹೋರಾಟ ಮಾಡಿದ ಸಮಾಜ ಸುಧಾರಕರೆಂದು ಕರೆಸಿಕೊಂಡವರಿಗೆ ಎಲ್ಲರಿಗೂ ಇದ್ದದ್ದು, ಇರುವುದು ಇಪ್ಪತ್ತ ನಾಲ್ಕೇ ಗಂಟೆ ಅಲ್ಲವೇ... ಸಮಯದ ಹೊಂದಿಸಿಕೊಳ್ಳುವಿಕೆ, ಸಮಯ ಪರಿಪಾಲನೆಯ ಮನಸ್ಸು, ಶ್ರದ್ಧೆ, ಭಕ್ತಿ ಇವೆಲ್ಲಾ ನಮ್ಮಲ್ಲಿದ್ದರೆ ಹೊಂದಿಸಿಕೊಂಡು ನಮಗಗತ್ಯವಾದ ಯಾವುದೇ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಸಾಧ್ಯ.... ಅಗತ್ಯ ಅನಗತ್ಯತೆ ಅನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು........ ಅಯ್ಯೋ...ಈಗ ನೆನಪಾಯ್ತು ನೋಡಿ ನಾನೂ ತುಂಬಾ ಬ್ಯುಝಿ.......... ನಿಮ್ಮ ಜೊತೆ ಮಾತಾಡೋದಕ್ಕೆ  ನನಗೂ ಟೈಮ್ ಇಲ್ಲ ಸ್ವಾಮೀ................. ಏನಂತೀರಿ?!
 

Sunday, November 6, 2011

ವಸಂತ ಮೂಡುವುದೆಂದಿಗೆ...........................?

ವಸಂತ ಮೂಡುವುದೆಂದಿಗೆ..........................................?ವಸಂತ ಮೂಡುವುದೆಂದಿಗೆ........ ಈ ಜನ ಕೋಟಿಯ ಗೋಳು ಬಾಳಿಗೆ............. ಜಿ. ಎಸ್. ಶಿವರುದ್ರಪ್ಪ ಅವರ ಭಾವಗೀತೆ ಇದು..... ಈ ಹಾಡನ್ನು ಸಿ ಅಶ್ವಥ್ ಅವರ ಧ್ವನಿಯಲ್ಲಿ ಕೇಳ್ತಾ ಕೂತಿದ್ದೆ... ನಮ್ಮ ಜೀವನ ಅದೆಷ್ಟು ಸಮಸ್ಯೆಗಳೊಂದಿಗೆ ಸಾಗುತ್ತಿದೆ.... ಇವಕ್ಕೆಲ್ಲಿ ಕೊನೆ? ನಾವು ಮಾಡಿದ ತಪ್ಪಾದರೂ ಏನು? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಪ್ರಶ್ನೆಗಳು ಬಿರುಗಾಳಿಯಂತೆ ಎದ್ದು ಬಿಟ್ಟವು... ಹೀಗೆ ಮನಸ್ಸು ಎಲ್ಲೆಲ್ಲೋ ಓಡ್ತಾ ಇತ್ತು.. ಯಾವತ್ತೂ ಇಂತಹ ಪ್ರಶ್ನೆಗಳು ಕೊನೆಯಾಗೋದು ನಾವು ಮನುಷ್ಯರಾಗಿ ಹುಟ್ಟಿದ್ದೇ ತಪ್ಪಾ ಅನ್ನುವಲ್ಲಿ!?...... ನನ್ನ ಆಸಕ್ತಿಯ ವಿಷಯ ಸಮಾಜಶಾಸ್ತ್ರ ಆಗಿರುವುದಲೇ ಇರಬೇಕು ನನ್ನ ತಲೆಯೊಳಗೆ ಇಂತಹ ಪ್ರಶ್ನೆಗಳು ಸದಾ ಏಳುವುದು... ಏಳುತ್ತಲೇ ಇರುವುದು.... ಹೌದು, ತರಗತಿಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತಿದ್ದೆ. ಕೌಟುಂಬಿಕ ವಿಘಟನೆ, ಮಧ್ಯಪಾನ, ಅಮಲು ಸೇವನೆ, ಬಾಲಕಾರ್ಮಿಕರು, ವರದಕ್ಷಿಣೆ, ಭ್ರಷ್ಟಾಚಾರ, ಜನಸಂಖ್ಯಾ ಸ್ಫೋಟ, ನಿರುದ್ಯೋಗ, ಬಡತನ, ಬಾಲಾಪರಾಧ, ಕೊಲೆ, ಸುಲಿಗೆ, ಹೀಗೆ ಹತ್ತು ಹಲವು ಸಮಸ್ಯೆಗಳ ಪಟ್ಟಿ ಬೆಳೆದೇ ಹೋಯ್ತು. ಹಾಗಾದ್ರೆ ಈ ಸಮಸ್ಯೆಗಳಿಗೆ ಕಾರಣ ಏನಿರಬಹುದು ಅನ್ನುವಾಗ ಅದಕ್ಕೂ ಬೇರೆ ಬೇರೆ ಕಾರಣಗಳ ಪಟ್ಟಿ ಬೆಳೆಯುತ್ತಿದ್ದ ಹಾಗೇ ಬಂದ ಒಂದು ಉತ್ತರ ಕಾಲ ಕೆಟ್ಟು ಹೋಗಿದೆ...
ಯೋಚಿಸಲೇ ಬೇಕಾದ ಉತ್ತರ ಅಲ್ಲವೇ?.............!!!!!!! ಸ್ವಲ್ಪ ತಡೆದು ಕೇಳಿತು ಮನಸ್ಸು... ಕಾಲ ಕೆಟ್ಟಿದೆಯೇ? ನಾವು ಕೆಟ್ಟವರಾಗಿದ್ದೇವೆಯೇ? ಕಾಲ ಬದಲಾಗಿದೆಯೆ? ನಾವು ಬದಲಾದದ್ದೇ? ಯಾವುದು ಸರಿ, ಯಾವುದು ತಪ್ಪು? ಕಾಲ ಅಂದಿಗಿಂತ ಇಂದು ಹೇಗೆ ಭಿನ್ನ? ನಮ್ಮ ಜೀವನ ಶೈಲಿ, ಆಲೋಚನೆ, ಆಸಕ್ತಿ ಎಲ್ಲಾ ಬದಲಾಗಿದೆ ನಿಜ... ಈ ಬದಲಾವಣೆಗಳೊಂದಿಗೆ ನಾವು ಸ್ವಾರ್ಥಿಗಳಾಗುತ್ತಿದ್ದೇವೆ, ಬೇಕು ಬೇಡದ ದುಶ್ಚಟಗಳ ದಾಸರಾಗುತ್ತಿದ್ದೇವೆ, ಇಂದಿನ ಸುಖಕ್ಕಾಗಿ ನಾಳಿನ ಬದುಕನ್ನು ಮರೆಯುತ್ತಿದ್ದೇವೆ, ನಮ್ಮ ಸುಖದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ, ಆದರೆ ನಮ್ಮ ಸುತ್ತ ನಮ್ಮ ಸುಖಕ್ಕಾಗಿ ಹೆಣೆದುಕೊಂಡ ಬಲೆಗೆ ನಮ್ಮೊಂದಿಗೆ ನಮ್ಮವರೆಲ್ಲಾ ಬಲಿಯಾಗುತ್ತಾರೆ ಎಂದೊಮ್ಮೆಯಾದರೂ ಆಲೋಚಿಸುತ್ತೇವೆಯೇ? ನಾವು ಮಾಡಿದ ಪಾಪ ಕರ್ಮದ ಫಲವನ್ನು ನಮ್ಮ ಮುಗ್ಧ ಮಕ್ಕಳು ಅನುಭವಿಸುವಂತಾದರೆ? ಮಾನವ ನಿರ್ಮಿತ ಸಮಸ್ಯೆಗಳೇ ಹೆಚ್ಚಿರುವಾಗ ವಿಧಿಯನ್ನು ಹಳ್ಲಿಯುವುದೆಷ್ಟು ಸೂಕ್ತ?
ಬರಗಾಲ, ನೆರೆ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿಗಳೇ ಮೊದಲಾದ ಸಮಸ್ಯೆಗಳೋ ಭೀಕರ ರೀತಿಯಲ್ಲಿ ಕಾಡುತ್ತಿವೆ... ಇದಕ್ಕೂ ಕಾರಣ ನಾವೇನೇ............????!!! ಹೌದೆಂದಾದರೂ ಅಲ್ಲವೆಂದು ಜಾರಿಕೊಳ್ಳುವುದು ಸುಲಭವಷ್ಟೆ?! ಅನಾಥರಾದವರೆಷ್ಟೋ, ಆಸ್ತಿಪಾಸ್ತಿ ಕಳಕೊಂಡವರೆಷ್ಟೋ, ಹಸಿವಿನಿಂದ ನರಳುವವರೆಷ್ಟೋ, ಕಳಕೊಂಡವರಿಗಾಗಿ ಹಂಬಲಿಸುವವರೆಷ್ಟೋ, ಕೊರಗುವವರೆಷ್ಟೋ, ಮನೆಮಠಗಳಿಲ್ಲದೆ ಪರದಾಡುವವರೆಷ್ಟೋ, ಹೇಗೆ ಮನುಷ್ಯ ತನ್ನ ಬದುಕನ್ನು ಸುಂದರವಾಗಿಸುವುದು? ಚಿಂತೆ, ಕೊರಗು, ದುಗುಡ, ದುಮ್ಮಾನ, ದುಃಖ, ಇಲ್ಲದ ಸಂತೃಪ್ತರು ಎಲ್ಲಾದರೂ ಇದ್ದರೆಯೇ ಎಂದರೆ ಸಾವಿಲ್ಲದ ಮನೆಯ ಸಾಸಿವೆಯ ತಾ ಅಂದಹಾಗಾಗುವುದಿಲ್ಲವೆ?
ಹ್ಮುಂ... ಅದೇ ಮತ್ತದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ............. ವಸಂತ ಮೂಡುವುದೆಂದಿಗೆ........ ಈ ಜನ ಕೋಟಿಯ ಗೋಳು ಬಾಳಿಗೆ.............

Sunday, October 30, 2011

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........!?

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........?!  ಇಂದುಗಳು ನಾಳೆಗಳು ಹಿಂದೆ ಹೀಂದೋಡುವುವು ತುದಿ ಮೊದಲ ಕಾಣದನಂತತೆಯ ಕಡೆಗೆ.............ಕಾಲಚಕ್ರ ನಿರಂತರವಾಗಿ ಉರುಳುತ್ತಲೇ ಇರುತ್ತದೆ. ಓಡುವ ಕಾಲದೊಂದಿಗೆ ನಮಗರಿವಿಲ್ಲದೆಯೇ ಓಡುವ ಯಂತ್ರಗಳು ನಾವೂ ಆಗಿಬಿಟ್ಟಿದ್ದೇವೆ! ಬಾಳ ಕಡಲಲ್ಲಿ ಬಂದಪ್ಪಳಿಸುವ ತೆರೆಗಳಿಗೆ ಮೈಯೊಡ್ಡಿ, ಬಿರುಗಾಳಿ ಬರಸಿಡಿಲುಗಳಿಗೆ ಕೂಡಾ ವಿಚಲಿತರಾಗದ ಸ್ಥಿತಪ್ರಜ್ಞರಾಗಿ, ಹಳತುಗಳ ನೆನಪುಗಳೊಂದಿಗೆ ಹೊಸತುಗಳೆಡೆಗೆ ಅನಿವಾರ್ಯವೆಂಬಂತೆ ಧಾವಿಸುತ್ತಿದ್ದೇವೆ! ಮನೆ ಮನದ ತುಂಬೆಲ್ಲಾ ಹೊರಲಾರದಷ್ಟಿರುವ ಭಾರವನ್ನು ಹೊತ್ತುಕೊಂಡೂ ಸಮಾಜದ ಮುಂದೆ ನಗುವಿನ ಮುಖವಾಡದ ಸಂತೋಷಿಗಳಾಗಿದ್ದೇವೆ!? ಏನಿದೆ ಏನಿಲ್ಲ ಎಂಬುದಾಗಿ ಇತರರು ನಮ್ಮನ್ನು ಕಂಡು ಹಲುಬುವಷ್ಟು ಸುಖಿಗಳಾಗಿದ್ದೇವೆ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೆ ಜೀವನ ಎಂಬುದಾಗಿ ಕವಿಯೂ ಸ್ವಾನುಭವದಿಂದಲೇ ಹೇಳಿರಬಹುದಷ್ಟೇ!? ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದ ಹಿರಿಯರು, ಶಿವಶರಣರು, ದಾಸವರೇಣ್ಯರು ಕೂಡ ಬಹುಶಃ ಬದುಕಿದ್ದು ನಾಳಿನ ಬದುಕಿನ ಸುಂದರ ಕಲ್ಪನೆಯೊಂದಿಗೆ ಅಥವಾ ಹಗಲೋ ಇರುಳೋ ಅರಿತೋ ಅರಿಯದೆಯೋ ಕಂಡ ಕನಸುಗಳೊಂದಿಗೆಯೇ...........ಅಷ್ಟಕ್ಕೂ ಅವರೇನು ಅಲ್ಪತೃಪ್ತರಾಗಿರಬಹುದೇ?ಒಬ್ಬ ವ್ಯಕ್ತಿಯ ಬದುಕು ಹುಟ್ಟಿದಂದಿನಿಂದ ಸಾಯುವವರೆಗೂ ಸುಖಮಯವಾಗಿಯೇ ಇದ್ದೀತೆ? ಅಥವ ಇರಬೇಕೆಂದು ಬಯಸಿದರೆ ಅದು ಅತಿ ಆಸೆಯೋ ಸ್ವಾರ್ಥವೋ ಎಂದು ಕರೆಯಿಸಿಕೊಳ್ಳದೇನು?! ಹಾಗೆ ಹೇಳುವುದಾದರೆ ಸುಖ ಎಂಬುದನ್ನು ನಿರ್ಧಿಷ್ಟವಾಗಿ ವ್ಯಾಖ್ಯಾನಿಸುವುದಕ್ಕಾದೀತೇ? ಕಷ್ಟ ಸುಖ, ನೋವು ನಲಿವು, ಸಂತೋಷ ದುಃಖ, ಎಲ್ಲವೂ ಜೀವನದ ಅವಿಭಾಜ್ಯ ಅಂಗಗಳೆ... ಇವೆಲ್ಲವುಗಳ ಸಂಮಿಶ್ರ ಪಾಕದಲ್ಲೇ ಜೀವನದ ಸ್ವಾರಸ್ಯ ಅಡಗಿದೆ. ಕಷ್ಟದ ಅರಿವಾಗದ ವ್ಯಕ್ತಿಗೆ ಸುಖದ ಅನುಭವವಾಗುವುದಾದರೂ ಹೇಗೆ? ನೋವೇ ಗೊತ್ತಿಲ್ಲದವನಿಗೆ ನಲಿವಿನ ಅರಿವೆಲ್ಲಿಯ ಮಾತು!? ದುಃಖವೇ ಇಲ್ಲದೆ ಸಂತೋಷದ ಅರಿವಾಗುವುದಾದರೂ ಹೇಗೆ? ಕಹಿ ಎಂದರೇನೆಂದು ತಿಳಿದರೇ ತಾನೆ ಸಿಹಿಯನ್ನನುಭವಿಸುವುದು ಸಾಧ್ಯವಾಗುವುದು? ಕಳೆದುಕೊಂಡ ನಂತರವೇ ಅದರ ಬೆಲೆಯ ಅರಿವಾಗುವುದು............!? ಮೊನ್ನೆ ನನ್ನ ಆತ್ಮೀಯ ಸಹೋದ್ಯೋಗಿಯೊಬ್ಬರಲ್ಲಿ ಮಾತನಾಡುತ್ತಿದ್ದೆ
ಒಂದಂತು ಸತ್ಯ. ಮನುಷ್ಯ ಅಲ್ಪತೃಪ್ತನಂತೂ ಅಲ್ಲವೇ ಅಲ್ಲ. ಅಥವ ಹೌದೆಂದಾದರೆ ಆತ ಸಾಮಾನ್ಯ ಮನುಷ್ಯನೆನಿಸಿಕೊಳ್ಳಲಾರ. ಮಹಾತ್ಮನಾಗಿಬಿಡುತ್ತಾನೆ ಅಲ್ಲವೆ? ತಾಯಿ ತನ್ನ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆದುಕೊಳ್ಳಬೇಕಂದುಕೊಳ್ಳುವುದು, ಸಹೋದ್ಯೋಗಿಗಳು ಎಲ್ಲರಿಗಿಂತ ಹೆಚ್ಚಾಗಿ ನಾವೇ ಗುರುತಿಸಿಕೊಳ್ಳಬೇಕಂದುಕೊಳ್ಳುವುದು, ಎಲ್ಲರಿಗಿಂತ ಸುಂದರಿಯಾಗಿ ನಾನೇ ಮೆರೆಯಬೇಕಂದುಕೊಳ್ಳುವುದು, ಎಲ್ಲರಿಗಿಂತ ಹೆಚ್ಚಿನ ಸಂಪತ್ತು ತಮ್ಮದಾಗಬೇಕೆಂದುಕೊಳ್ಳುವುದು, ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಬಗೆಯಲ್ಲಿ ಪರಿತಪಿಸುವವರು ನಾವು...... ಕಡಿಮೆ ಅಂಕ ಬಂತೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಬಯಸಿದ ಹುಡುಗ ಅಥವಾ ಹುಡುಗಿ ಸಿಗಲಿಲ್ಲವಲ್ಲ ಎಂದುಕೊಂಡು ಸಾಯ ಹೊರಟದ್ದು, ಐಶಾರಾಮದ ಬದುಕಿನ ಕನಸು ಕಂಡು ಮಾಡಿದ ಸಾಲ ತೀರಿಸಲಾರದೆ ಮನನೊಂದು ಜೀವಕಳೆದುಕೊಳ್ಳುವ ನಿರ್ಧಾರ ಮಾಡಿದ್ದು, ಎಲ್ಲಾ ನಮ್ಮ ಕಣ್ಣಮುಂದಿರುವ ಸಾಕ್ಷಿಗಳು...... ಸಹನೆಯೇ ಇಲ್ಲದ ಬದುಕು ನಮ್ಮದಾಗಿ ಬಿಟ್ಟಿದೆ. ತಾಳ್ಮೆ ಇಲ್ಲದ ದಿನಗಳು ನಮ್ಮದಾಗುತ್ತಲಿವೆ. ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ, ಮನುಷ್ಯ ಸಂಬಂಧ ಎತ್ತ ಸಾಗುತ್ತಲಿದೆ.... ಅಂದರೆ ದುಡ್ಡಿನತ್ತ... ಒಡವೆಗಳತ್ತ... ಇನ್ನೆತ್ತೆತ್ತಲೋ...... ನಮ್ಮ ದೃಷ್ಟಿ ಆಕಾಶದೆಡೆಗಿದೆಯೇ ಹೊರತು ಭೂಮಿಯೆಡೆಗಲ್ಲ...!
ಭಾವನೆಗಳಿಗೆ ಬೆಲೆಯೆಲ್ಲಿದೆ? ಇತರರ ಮೇಲೆ ದಬ್ಬಾಳಿಕೆ ಮಾಡಿ, ಇತರರಿಂದ ಕಸಿದುಕೊಂಡು, ಇತರರ ಭಾವನೆಗಳ ಮೇಲೆ ಕುದುರೆ ಸವಾರಿ ಮಾಡಿ ಕ್ರೂರಿ ಎನಿಸಿಕೊಳ್ಳುವುದಕ್ಕಿಂತ ಭಾವಜೀವಿಯಾಗಿ ಅಲ್ಪತೃಪ್ತರಾಗಿ ಸುಮ್ಮನಾಗಿ ಬಿಡುವುದೇ ಒಳಿತಲ್ಲವೆ?ಮಾನವ ಸಂಬಂಧಗಳಿಗೆ ಬೆಲೆ ಕೊಡುವ, ತನ್ನಂತೆ ಪರರ ಬಗೆವ, ಪರೋಪಕಾರಿ ಮನೋಧರ್ಮವನ್ನು ಬೆಳೆಸಿಕೊಳ್ಳುವ, ಎಲ್ಲರ ಕಷ್ಟ ಸುಖಗಳಲ್ಲಿ ಸ್ಪಂದಿಸುವ, ಸಮಾನ ಮನಸ್ಕರಾಗಿ ಹೊಂದಿಕೊಂಡು ಬಾಳುವ, ದಿನಗಳು ನಮ್ಮವಾದಾವೇ? ಬಂದೇ ಬರುತಾವ ಕಾಲ ಅಂತ ಹಾಡಿದ್ದಕ್ಕೆ ಸಾರ್ಥಕ ಅನ್ನುವ ಕಾಲ ....... ಬೇಗನೆ ಹತ್ತಿರವಾದೆತೇ? ..... ತಲ್ಲಣಿಸದಿರು ಕಂಡ್ಯ ತಾಳು ಮನವೇ....... ಕಾಯಬೇಕಷ್ಟೇ.....................!? ಏನಂತೀರಿ.................................
....... ಮಾತು ಮುಂದುವರಿದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದರೂ ಕೊನೆಗೊಂಡದ್ದು ಅಲ್ಲೇ...... "ಎಲ್ಲ ನಿನ್ನ ಲೀಲೆ ತಾಯೆ ........ ಎಲ್ಲ ನಿನ್ನ ಮಾಯೆ" ಎನ್ನುವಲ್ಲೇ........... ಹೀಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಹರಟುವಾಗಲೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆಗಳನ್ನೆ ಹೇಳುವುದುಂಟು. ಎಲ್ಲರೂ ಒಟ್ಟಾಗಿ ಪರಿಹಾರಗಳ ಬಗೆಗೂ ಆಲೋಚಿಸುವುದುಂಟು. ಎಲ್ಲಾ ಮುಗಿದು ನಂತರ ಮಾತುಗಳನ್ನು ಮೆಲುಕು ಹಾಕುವಾಗ ಹಲವಾರು ಪ್ರಶ್ನೆಗಳು ಕಾಡತೊಡಗುತ್ತವೆ. ಆ ಪ್ರಶ್ನೆಗಳೊಂದಿಗೆ ಹಿರಿಯರೊಬ್ಬರನ್ನು ಮಾತನಾಡಿಸಿದಾಗ "ಯಾವಾಗಲೂ ಪ್ರಶ್ನೆಗಳನ್ನೇ ಯೋಚಿಸಹೊರಟರೆ ಪ್ರಶ್ನೆ ಹಾಗೇ ಉಳಿದು ಬಿಡುತ್ತದೆ... ಬಂದದ್ದನ್ನು ಬಂದ ಹಾಗೆಯೆ ಎದುರಿಸಿಕೊಂಡು ಹೋದರಾಯಿತು ಬಿಡು" ಎಂದು ಸಮಾಧಾನ ಮಾಡುತ್ತಾರೆ. ಅನುಭವದ ಮತಾಗಿರುವುದರಿಂದ ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯ ಅಲ್ಲವೆ?

Thursday, October 27, 2011

ಬದುಕೇ ಏಕೆ ಕಾಡುವೆ ಹೀಗೆ

ಬದುಕೇ ಏಕೆ ಕಾಡುವೆ ಹೀಗೆ.........................................................................?ಹೌದಲ್ವಾ! ನಿಮಗೂ ಹೀಗೆ ಎಂದಾದರೂ ಅನಿಸಿದ್ದುಂಟಾ? ಪ್ರತಿ ಕ್ಷಣ, ಪ್ರತಿ ಗಂಟೆ, ವಾರ, ತಿಂಗಳು, ವರ್ಷ, ಹೀಗೇ ಎಷ್ಟೇ ಆಲೋಚಿಸಿದರೂ ಉತ್ತರವೇ ಸಿಗದ ಪ್ರಶ್ನೆ ಇದು ಅಂತ ನನ್ನ ಹಾಗೆ ಕೆಲವೋಮ್ಮೆಯಾದರೂ ನೀವೂ ತಲೆಕೆರೆದುಕೊಂಡಿರಬಹುದಲ್ವಾ!ಹುಂ!? ಅದು ಒಂದು ದಿನ ಎಸ್ಸೆಸ್ಸೆಲ್ಸಿ ಮುಗಿಯುವ ದಿನ ಅಥವಾ ಪಿಯುಸಿ ಮುಗಿಸಿ ಹೊರ ಹೋಗುವ ದಿನ, ಇನ್ನೂ ಹೇಳುವುದಾದರೆ ಡಿಗ್ರಿ ಮುಗಿಸಿ ಹೊರಬರುವಾಗ ಅಂತಾನಾದ್ರೂ ಇಟ್ಕೊಳ್ಳೋಣ. ಆಟೋಗ್ರಾಫ಼್ ನಲ್ಲಿ ಬಯಸಿದ ಬಯಕೆಗಳು ಬಳಿ ಬಂದು ಬಾಳು ಬಂಗಾರವಾಗಲಿ ಅಂತ ಪರಸ್ಪರ ಹಾರೈಸಿಕೊಂಡದ್ದು....... ಬಿಟ್ಟು ಬೇರಾಗ್ತೇವಲ್ಲಾ ಅಂತ ಅಪ್ಪಿಕೊಂಡು ಅತ್ತದ್ದು.... ಪ್ಲೀಸ್ ಸೆಂಡ್ ಮಿ ಯುವರ್ ವೆಡ್ಡಿಂಗ್ ಕಾರ್ಡು ಅಂತ ಕೇಳಿ ಕೊಂಡು ಸಂಭ್ರಮಿಸಿದ್ದು........ ಅದಕ್ಕೂ ಹಿಂದೆ ಅಕ್ಕ ತಂಗಿ ಅಣ್ಣ ತಮ್ಮ ಗೆಳೆಯ ಗೆಳತಿಯರ ಜೊತೆ ಆಡಿದ ಅಡುಗೆ ಆಟ, ಮದುವೆ ಆಟ, ಲಗೋರಿ ಆಟ, ಚೆನ್ನೆ ಮಣೆ ಆಟ, ಗೊತ್ತೇ ಇಲ್ಲದ ಆಂಗ್ಲ ಮಾಧ್ಯಮದ ಮಕ್ಕಳ ಆಟ ಅಥವ ಪೇಟೆ ಮಕ್ಕಳ ಆಟ ಎಂದೇ ಆ ಕಾಲದಲ್ಲಿ ಕರೆಸಿಕೊಂಡಿದ್ದ ಚೆಸ್ ಆಟ............... ಇನ್ನೂ ಏನೇನೋ ಆಟಗಳು...... ಬಾಲ್ಯದ ದಿನಗಳದೆಷ್ಟು ಮಧುರವಾದವು...... ಈಗ ಹಳೆಯ ನೆನಪುಗಳಷ್ಟೇ....!? ಆಗ ಅನಿಸಿದ್ದು ಬೇಗ ದೊಡ್ಡವರಾಗಿ ಬಿಟ್ಟರೆ ಓದುವ ಕಷ್ಟ ಇಲ್ಲ, ನಮಗೆ ಬೇಕಾದ ಹಾಗೆ ಖುಷಿಯಲ್ಲಿ ಇರಬಹುದಲ್ಲ ಅಂತ.... ದೂರದ ಬೆಟ್ಟ ನುಣ್ಣಗೆ ಅಂತ ಹಿರಿಯರು ಹೇಳಿದ್ದು ಇದನ್ನೇ ಅಂತ ಅರ್ಥ ಆಗೋದು ಮಾತ್ರ ತಡವಾಗಿ ಅಷ್ಟೇ.....ಓದು ಪರೀಕ್ಷೆ ಹತ್ತಿರ ಬರ್ತಿದೆ ಅನ್ನುವ ಅಮ್ಮನ ಎಚ್ಚರಿಕೆಯ ನುಡಿ ಕಿವಿಗೆ ಕರ್ಕಶವಾಗಿಯೇ ಕೇಳಿದ್ದು........ ಅಪ್ಪನ ಹೆದರಿಕೆಗೆ ಪಠ್ಯ ಪುಸ್ತಕದ ಎಡೆಯಲ್ಲಿಟ್ಟು ಓದುತ್ತಿದ್ದುದು ಆ ವಯಸ್ಸಿಗೆ ಇಷ್ಟವಾಗುತ್ತಿದ್ದ ಸಾಯಿಸುತೆಯ ಅದೆಷ್ಟೋ ಕಾದಂಬರಿಗಳನ್ನು..... ಪರೀಕ್ಷೆಯ ಮೊದಲಿನ ದಿನದವರೆಗೂ ಓದು ಅಂದ ಕೂಡಲೇ ಓದಿದ್ದು ಓದುತ್ತಿದ್ದದ್ದು ಕಾದಂಬರಿ ಪುಸ್ತಕಗಳನ್ನಷ್ಟೇ.. ಹೊರತು ಪಾಠ ಪುಸ್ತಕಗಳನ್ನಲ್ಲ..... ಅಮ್ಮ ಮನೆಕೆಲಸ ಕಲಿ ಎಂದಾಗ ಬೇಕಾದಾಗ ಮಾಡಿದರಾಯ್ತು ಬಿಡು....ಎಂದು ಚೀರಿ ಜಾಗದಿಂದ ಕಾಲ್ಕಿತ್ತದ್ದು... ಎಲ್ಲವೂ ಸದಾ ಕಾಡುವ ನೆನಪುಗಳು........!ವಾಸ್ತವದಲ್ಲಿ ಗಳಿಸುವ ಸ್ವಾತಂತ್ರ್ಯ ನಮ್ಮದು....... ವ್ಯಯಿಸುವುದಕ್ಕೆ ಹಲವರ ಅಪ್ಪಣೆ ಬೇಕು...... ನನ್ನ ಜವಾಬ್ದಾರಿಗಳೇನು ಅನ್ನುವುದಕ್ಕಿಂತ ನಿನ್ನ ಜವಾಬ್ದಾರಿಗಳ ಪಟ್ಟಿ ಹನುಮಂತನ ಬಾಲ........... ನಾನೇನು ಅನ್ನುವುದಕ್ಕಿಂತ ನಿನ್ನನ್ನೆಚ್ಚರಿಸುವುದಕ್ಕೇ ಇರುವವರ ಸಾಲು..... ಎಲ್ಲಾ ಸಂದರ್ಭಗಳಲ್ಲೂ ನೆನಪಾಗುವುದು.... ತಾಳುವಿಕೆಗಿಂತನ್ಯ ತಪವು ಇಲ್ಲ............ ದಾಸ ವಾಣಿ ಅದೆಷ್ಟು ಅರ್ಥಪೂರ್ಣ........... ಆದರೆ ಅದ್ಯಾರಿಗೆ ಅನ್ವಯ ಅನ್ನುವುದು ಚಿಂತಿಸಲೇಬೇಕಾದ ಸಂಗತಿ........
ಬದುಕು ನಾವಂದುಕೊಂಡಂತಿರುವುದಿಲ್ಲ.. ವಾಸ್ತವಕ್ಕೆ ಬಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಆ ದಿನಗಲೇ ಒಳ್ಳೆಯದಿತ್ತು ಅನ್ನಿಸದಿರದು....... ಬಯಸಿದ್ದು ಸಿಗುವುದೂ ದೂರದ ಮಾತು........ ಆಸೆಗಳ ಲೋಕದಲಿ ಕಥೆಗಳ ಬರೆವಂಥ.......... ಅನ್ನುವ ಚಿತ್ರ ಗೀತೆ ಪದೇ ಪದೆ ನೆನಪಾಗುತ್ತದೆ........ ಅದೇ ಮತ್ತೆ ಮತ್ತೆ ನಮ್ಮನ್ನು ಹಿಂದಕ್ಕೂ ಕರೆದೊಯ್ಯುತ್ತದೆ.......ಹೇಗೆ ಅಂತೀರಾ? ನಾನು ೭ ನೆಯ ತರಗತಿಯಲ್ಲಿ ಓದಿದ, ಕನ್ನಡ ಕಲ್ಸಿದ ಗುರುವಿಗೆ ಬಯ್ದುಕೊಂಡಾದರೂ ಕಂಠಪಾಠ ಮಾಡಿದ ....... ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ ........ ಏನಂತೀರಿ

Wednesday, October 19, 2011

ಓಹ್! ಕನಸೇ ವಿಚಿತ್ರ

ಓಹ್! ಕನಸೇ ವಿಚಿತ್ರ ...........ಹೌದು...... ಅದಕ್ಕೇ ಇರಬೇಕು ಕವಿ ಹೇಳಿದ್ದು ಕನಸುಗಳ ಮಾತು ಮಧುರ ಅಂತ.... ಈ ಕನಸುಗಳೇ ಹೀಗೆ..... ಮತ್ತೆ ಮತ್ತೆ ನೆನಪಾಗಿ, ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಅಳಿಸಿ, ಕೆಲವೊಮ್ಮೆ ಸಿಟ್ಟು ತರಿಸಿ, ಕೆಲವೊಮ್ಮೆ ಮೌನವಾಗಿಸಿ, ಮತ್ತೆ ಕೆಲವೊಮ್ಮೆ ಬೊಬ್ಬಿಡುವಂತೆ ಮಾಡಿಬಿಡುತ್ತದೆ. ಈ ಅನುಭವ ಬಹುಶಃ ನನ್ನದು ಮಾತ್ರ ಅಲ್ಲ. ನಿಮ್ಮದೂ ಕೂಡಾ ಅಲ್ವಾ? ಹಾಂ, ಅಂದ ಹಾಗೆ ಕನಸು ಕಾಣುವವರಲ್ಲಿ ಬೇರೆ ಬೇರೆ ವಿಧದವರಿದ್ದಾರೆ ಅಂತ ಭಾವಿಸಿದ್ದೇನೆ. ಹಾಗೆಯೇ ಕನಸಿನಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನುವುದೂ ಸತ್ಯವೇ ಬಿಡಿ. ಕೆಲವರು ನಿದ್ದೆಯಲ್ಲಿ ಕನಸು ಕಂಡರೆ ಇನ್ನು ಕೆಲವರು ಬಸ್ ಸ್ಟ್ಯಾಂಡ್ ನಲ್ಲಿ, ತರಗತಿಗಳಲ್ಲಿ ಅಧ್ಯಾಪಕರು ಪಾಠ ಮಾಡುವಾಗ, ಕಚೇರಿಗಳಲ್ಲಿ ಕೆಲಸ ಮಾಡುವಾಗ, ಹೀಗೆ ಹಲವಾರು ಸಂದರ್ಭಗಳಲ್ಲಿ ಕನಸು ಕಾಣುವವರಿದ್ದಾರೆ. ಹಾಗೆಂದ ಮಾತ್ರಕ್ಕೆ ಕನ್ಸು ಕಾಣುವುದಕ್ಕೆ ನಿರ್ಧಿಷ್ಟ ಸ್ಥಳದ ಅಗತ್ಯ ಇದೆ ಎಂಬುದು ನನ್ನ ವಾದವಲ್ಲ. ಇನ್ನೊದು ರೀತಿಯಲ್ಲಿ ನೋಡಿದರೆ ಭವಿಷ್ಯದ ಬಗೆಗೆ ಕನಸು ಕಾಣದೇ ಇದ್ದರೆ ಮನುಷ್ಯ ಏನನ್ನೂ ಸಾಧಿಸುತ್ತಿರಲಿಲ್ಲ ಅಲ್ಲವೇ?ಯಾವನೋ ಒಬ್ಬ ಹೀರೋ ಸಿನಿಮಾದಲ್ಲಿ ಹತ್ತು ಜನರನ್ನು ಒಮ್ಮೆಲೇ ಹೊಡೆದುರುಳಿಸಿ ಬಿಟ್ಟದ್ದನ್ನು ಕಂಡು ನಾನು ಅವನಂತೆಯೇ ಮಾಡಬೇಕೆಂದು ಕನಸು ಕಾಣುವುದು, ಯಾವಳೋ ಒಬ್ಬ ನಟಿ ತುಂಡು ಬಟ್ಟೆ ಉಟ್ಟು ಹೀರೋ ಜೊತೆ ಕುಣಿಯುತ್ತಿದ್ದರೆ ಅದನ್ನೇ ವಾಸ್ತವ ಎಂದುಕೊಂಡು ನಾನೂ ಅವಳಂತಾಗುವ ಕನಸು ಕಾಣುವುದು, ಬಾರ್, ಪಬ್ ಗಳಲ್ಲಿ ಗೆಳೆಯರ ಜೊತೆ ಮಜಾ ಮಾಡುವ ಕನಸು ಕಾಣುವುದು, ಚೆಂದದ ಹುಡುಗಿ ಎಲ್ಲೋ ಹೋಗುತ್ತಿದ್ದರೆ ಆಕೆಯನ್ನು ತನ್ನವಳನ್ನಾಗಿಸಿಕೊಳ್ಳುವ ಕನಸು, ಹೀಗೆ ಇತ್ತೀಚಿನ ಕನಸುಗಳಿಗೆ ಅರ್ಥವೇ ಇಲ್ಲ ಎನಿಸಿಬಿಟ್ಟಿದೆ. ಆದರ್ಶ ಪುರುಷರ ಜೀವನ ಕಥೆಗಳನ್ನವಲೋಕಿಸಿ ನಾವೂ ಅವರಂತಾಗೋಣ ಅನ್ನುವ ಕನಸು ಕಾಣುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದೀತು..... ಇದು ಆಧುನಿಕತೆ! ?ಪ್ರತಿಯೊಂದಕ್ಕೂ ಆಧುನೀಕರಣ, ಪಾಶ್ಚಾತ್ಯೀಕರಣ, ನಗರೀಕರಣ ಅನ್ನುವ ಹಣೆಪಟ್ಟಿ ಕಟ್ಟುತ್ತೇವಲ್ಲ? ಅದಕ್ಕಿಂತ ಮೊದಲು ನಾವೇನು ಎಂಬುದನ್ನು ಆಲೋಚಿಸಿದ್ದೇವೆಯೆ? ಇವೆಲ್ಲವುಗಳಿದ್ದಾಗ್ಯು ನಾವಾರಿಸಿಕೊಂಡ ಬದುಕು ನಮಗೆ ಸಿಗುವುದು ಕಷ್ಟವಾದರೂ ಮನಸ್ಸು ಮಾಡಿದರೆ ಸಾಧ್ಯವಿಲ್ಲವೇ? ಪಬ್ಬು, ಬಾರು, ಇಸ್ಪೀಟು, ಸಿಗರೇಟು, ದಂಧೆಗಳೇ ಮೊದಲಾದುವುಗಳಿಂದ ಅಥವಾ ದೇಹದ ಏರುತಗ್ಗುಗಳೆಲ್ಲವನ್ನೂ ತೆರೆದಿಡುವಂತಹ ಉಡುಪಿನಿಂದ ಅಥವಾ ಇನ್ನೂ ಹೇಳಿಕೊಳ್ಳಲಾಗದಂತಹ ವರ್ತನೆಗಳಿಂದ ಮಾತ್ರ ಆಧುನೀಕತೆಯನ್ನು ಪ್ರತಿಬಿಂಬಿಸುವುದು ಸಾಧ್ಯವೆ?! ಇಂತಹ ಕನಸುಗಳನ್ನು ಸುಸಂಸ್ಕ್ರ‍ತ ರಾಷ್ಟ್ರ ಎನಿಸಿಕೊಂಡಿರುವ ಭಾರತಾಂಬೆಯ ಮಕ್ಕಳಾಗಿ ನಾವು ಕಾಣಬೇಕೆ?ಅಂದಿನ ಕವಿಗಳು ಕಂಡ ಹಾಗೆ, ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾವಾಗುವ ಹಾಗೆ, ಹಸುವಿನ ಕೊರಳ ಗೆಜ್ಜೆಯ ಧ್ವನಿ ಆಗುವ ಕನಸು, ನಮಗೇಕೆ ಕಾಣುವುದಿಲ್ಲ?ಯಾರದ್ದೋ ಪರ್ಸಿಗೆ ಕನ್ನ ಹಾಕಿ, ನಾನು ಶ್ರೀಮಂತನಾಗಿ ಮೆರೆಯಬೇಕು ಅನ್ನುವ ಕನಸು ಕಾಣುವುದಕ್ಕಿಂತ ಇದೆಷ್ಟೋ ವಾಸಿ ಅಲ್ಲವೇ? ಹಾಗೆಂದು ಕನಸು ಕಾಣುವುದೇ ತಪ್ಪೇ? ಖಂಡಿತಾ ಅಲ್ಲ............. ಇಂದು ಕಂಡ ಕನಸೇ ನಾಳಿನ ಭವಿಷ್ಯವನ್ನು ನಿರ್ಧರಿಸುವ ತೀರ್ಮಾನವೂ ಆಗಿರಬಹುದು. ಅದು ಆರೋಗ್ಯಕರವಾದ ಕನಸು ಕಂಡಾಗ ಮಾತ್ರ ಸಾಧ್ಯ. ಬದುಕಿನ ಒಳಿತು ಕೆಡುಕುಗಳನ್ನು ಸರಿದೂಗಿಸಿಕೊಂಡು ಬಾಳನ್ನು ಬದುಕಾಗಿಸುವ ಕನಸು ಅದು ಇರುಳು ಕಂಡದ್ದಾಗಿರಲಿ ಹಗಲು ಕಂಡದ್ದೇ ಇರಲಿ... ಉತ್ತಮ ಭವಿಷ್ಯ ನಿರ್ಮಾಣಕ್ಕೆ ದಾರಿಯಾಗಲಿ. ಕಂಡ ಕನಸುಗಳ ಕೈಗೂಡಿಸಿಕೊಳ್ಳುವ ಕಾರ್ಯಗಳಲ್ಲಿ ಕುಂದುಂಟಾಗದಿರಲಿ....... ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು, ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ತಂಗಳವೇ ಲೇಸು ಅನ್ನುವ ಸರ್ವಜ್ಞನ ಮಾತು ಸದಾ ಗಮನದಲ್ಲಿಟ್ಟುಕೊಳ್ಳೋಣ ಅಲ್ಲವೇ....................................................

 





Sunday, October 9, 2011

ಎಲ್ಲಿಂದಲೋ ಎಲ್ಲಿಗೋ.................................

ಹುಂ, ಇದೇನಿದು...........
ಇದು ಜೀವನ............ ಹುಟ್ಟು ಸಾವಿನ ಮಧ್ಯದ ದಿನಗಳು ......................
ಬೇಡದ ಬೇಕುಗಳನ್ನು ನಮ್ಮದಾಗಿಸಿ, ಎದ್ದ, ಅಪ್ಪಳಿಸಿದ ಅಲೆಗಳನ್ನು ಮೀರಿ ಮಾಡುವ ಹೋರಾಟ..............
ಸಿಹಿ ಕಹಿ ಜೊತೆಗೊಂದಿಷ್ಟು ಉಪ್ಪು ಹುಳಿ ಖಾರ..........................
ಎಲ್ಲೋ ಹುಟ್ಟಿ ಅದೆಲ್ಲೋ ಬೆಳೆದು ಅದೆಲ್ಲೋ ಸೇರಿ ಇನ್ನೂ ಎನೇನೋ ಆಗುವ ಪ್ರಯತ್ನದೊಂದಿಗೆ ಗೆಲುವಲ್ಲಿ ಹಿಗ್ಗಿ ಸೋಲಲ್ಲಿ ಕುಗ್ಗಿ.............
ಸಂತಸ ದುಃಖಗಳನ್ನು ಹೊಂದಿಸಿ ಸಮಾಜದಲ್ಲಿ ನಗುವಿನ ಸೋಗು ಹಾಕಿ..............................
ಪ್ರಯಾಣದಲ್ಲಿ ಸಿಗುವ ನಿಲ್ದಾಣಗಳಲ್ಲಿ ಬಸ್ಸು ನಿಂತಂತೆ ಸ್ವಲ್ಪ ಅಲ್ಲಿ ಸ್ವಲ್ಪ ಇಲ್ಲಿ ನಿಂತು ಕೂತು ಎದ್ದು ಬಿದ್ದು........
ಓಡುವ ಓಟ........ ಕಾಡುವ ಕಾಟ..........ಹುಡುಕಾಟ.... ಅವುಗಳೊಂದಿಗೆ ಕಂಡ ಕನಸುಗಳನ್ನು ನನಸಾಗಿಸುವ ಪರದಾಟ....
ಹೀಗಿರುವ ದಿನಗಳ ಮಧ್ಯದಲ್ಲಿ ನೋಡುವ, ಕೇಳುವ, ಮಾಡುವ ವಿಷಯಗಳ ಚರ್ಚೆ, ವಿಮರ್ಶೆ..........
ಎಲ್ಲಾ ಲಘು, ಘನ ವಾಸ್ತವಿಕ ವಿಷಯಗಳ ಸಂಕಲನ.............
ಮನಸ್ಸಿನ ಮಿಡಿತ ಹಾಗೂ ತುಡಿತ...................... ಅಷ್ಟೇ............!!!!!!!!!!!!!!!!!!!!!!!!!

Saturday, October 8, 2011

ಯಾವತ್ತೋ ಕಂಡ ಕನಸು ಈಗ ಸಾಕಾರಗೊಳ್ಳುವತ್ತ ಹೆಜ್ಜೆ ಇಡುತ್ತಿದೆ............ ನಿಮ್ಮ ಮನಸ್ಸಿನ ಮಾತಾಗಿ ನಿಮ್ಮ ಭಾವನೆಗಳಿಗೆ ಜೊತೆಯಾಗಿ ಸದಾ ನಿಮ್ಮೊಂದಿಗಿರುವ ಆಶಯ ನಮ್ಮದು.............. ನಮ್ಮ ಜೊತೆ ನೀವೂ ಇರ್ತೀರಲ್ವಾ?