Friday, December 28, 2012


ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ …… ಇದು ಕವಿವಾಣಿ. ಇಂದಿನ ಅನುದಿನದ ನಡವಳಿಕೆಗಳು ಆಗುಹೋಗುಗಳನ್ನೊಮ್ಮೆ ಅವಲೋಕಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸದಿರದು……. ವೈಜ್ನಾನಿಕಯುಗ ಇದು…. ಕಾಲ ಬದಲಾಗಿದೆ…….. ಮೊದಲಿನಂತಿಲ್ಲ ಎಂದು ಗೋಳಿಡುತ್ತಿರುವ ಅಜ್ಜಿ ತಾತ ಕೊಡುವ ಪ್ರೀತಿ, ಅಪ್ಪ ಅಮ್ಮ ಕೊಡುತ್ತಿದ್ದ ಪ್ರೀತಿ, ಅಕ್ಕ ತಂಗಿಯರ ಪ್ರೀತಿ, ಅಣ್ಣ ತಮ್ಮಂದಿರ ಪ್ರೀತಿ, ಬಹುಶಃ ದೀಪ ಹಿಡಿದು ಹುಡುಕಿದರೂ ಸಿಗದ ಕಾಲಘಟ್ಟದಲ್ಲಿ ನಾವಿದ್ದೇವೆ.

ಕಾಲ ಕೆಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತೇವೆ, ಕೆಟ್ಟದ್ದು ಕಾಲವೇ? ಇಲ್ಲ ನಾವೇ? ಯೋಚಿಸಬೇಕಾಗಿದೆ!..........ಅಪ್ಪ ಮಗಳ ಸಂಬಂಧ, ಅಣ್ಣ ತಂಗಿಯ ಸಂಬಂಧಗಳು ಎತ್ತ ಸಾಗುತ್ತಲಿವೆ………. ಕಾಮುಕರ ಕಣ್ಣಿಗೆ ಪುಟ್ಟ ಮಗುವಿನ ಮುಗ್ಧತೆಯೂ ಕಾಣದಾಗಿದೆ ಎಂದ ಮೇಲೆ ನಮ್ಮ ಸಮಾಜದ ಭೀಕರತೆಯನ್ನು ಅಳೆಯಲು ಬೇರೆ ಮಾಪನದ ಅಗತ್ಯ ಇರಲಿಕ್ಕಿಲ್ಲ ಅಲ್ಲವೆ? ರಾಮಾಯಣದ ರಾಮ ಸೀತೆಯರ ಆದರ್ಶ ಕಂಡು ಓದಿ ಕಲಿತು ತಿಳಿದ ದೇಶವೆ ಇದು? ಹತ್ತು ಹಲವು ಸಾಧು ಸಂತರು ಹುಟ್ಟಿ ಬಾಳಿದ ನಾಡೆ ಇದು? ಕಥೆಗಳಲ್ಲಿ ಕೇಳಿದ, ಪುರಾಣಗಳಲ್ಲಿ ಓದಿದ ಸಾಮಾಜಿಕ ನೀತಿ ನಿಯಮಗಳು, ರೀತಿರಿವಾಜುಗಳು, ಮೌಲ್ಯಗಳು ಬಿರುಗಾಳಿಗೆ ಸಿಲುಕಿ ದಿಕ್ಕೆಟ್ಟಿವೆಯೆ? ತ್ಸುನಾಮಿಗೆ ಸಿಲುಕಿ ಕೊಚ್ಚಿ ಹೋಗಿರಬಹುದೆ? ಅಥವ ಪ್ರಳಯ ಎಂದರೆ ಇದುವೇ?

Tuesday, December 11, 2012


ಏಕೆ ಕಾಡುವೆ ನನ್ನನು ಹೀಗೆ……………….


ಎಷ್ಟೋ ಸಲ ಬದುಕೇ ವಿಚಿತ್ರ ಅಂತ ನನ್ನ ಹಾಗೆ ನಿಮಗೂ ಅನ್ನಿಸಿರಬಹುದೆನೋ……. ಅದೆಲ್ಲೋ ಒಂದು ಕಡೆ ಕವಿ ಏಕೆ ಕಾಡುವೆ ನನ್ನನು ಹೀಗೆ ಅಂದಾಗ ಅದು ಹಾಸ್ಯವಾಗಿ ಕಂಡಿತ್ತು………. ಆದ್ರೆ ನಮ್ಮ ಅನುಭವಕ್ಕೆ ಅದು ಬಂದಾಗಲೇ ನಿಜವಾದ ಅರ್ಥದ ಅರಿವಾಗೋದು ಅಲ್ವಾ? ಆದ್ರೆ ಕವಿಯ ಕಲ್ಪನೆಯ ಕಾಟ ಅದ್ಯಾವುದೊ ಗೊತ್ತಿಲ್ಲ…….ನಮ್ಮನ್ನು ಕಾಡುವ ಕಾಟಗಳದೆಷ್ಟೋ….

ಕನಸು ಕಾಣೋದು ತಪ್ಪೇ? ಹಾಗಂತ ಕನಸೇ ಇಲ್ಲದ ಬದುಕು ಬದುಕೇ? ಕನಸೇ ತಾನೆ ಸಾಧನೆಗಳಿಗೆ ಸ್ಫೂರ್ತಿ? ಆದ್ರೆ ಕನಸೇ ಬದುಕೇ? ಅದೂ ಅಲ್ಲವೆಂದಾದ್ರೆ ಕನಸು ಕಾಣೋದಾದ್ರೂ ಹೇಗೆ? ಬರೀ ಪ್ರಶ್ನೆ ಪ್ರಶ್ನೆ ಪ್ರಶ್ನೆ……….. ಬದುಕ ತುಂಬೆಲ್ಲಾ ಪ್ರಶ್ನೆ, ಕೊನೆಗೆ ಬದುಕೇ ಪ್ರಶ್ನೆಯಾಗಿ ಕಾಡೀತು ಕೂಡಾ!!!!!!!!!!!!!!!!!!!!!!!!!!!!

ಒಂದೊಮ್ಮೆ ನಡೆದ ಮುಂದೆ ನಡೆಯಬಹುದಾದ ನಡೆಯಬೇಕೆಂದಿರುವ ಎಲ್ಲಾ ಘಟನೆಗಳು ಕನಸುಗಳೆ…. ಹಲವು ರಾತ್ರಿ ಕಂಡಿದ್ದಿರಬಹುದು, ಇನ್ನು ಕೆಲವು ಹಗಲು…… ಅಷ್ಟೆ!!!!! ಕಲ್ಪನೆಗಳೆಲ್ಲ ಒಂದಿಲ್ಲೊಂದು ದಿನ ಒಂದೊಂದು ರೂಪದಲ್ಲಿ ಕನಸುಗಳಾಗಿ ಆ ಲೋಕದ ತುಂಬೆಲ್ಲಾ ವಿಹರಿಸಿ ಬರುವುದು, ನಿಜ ಎಂದಾದಲ್ಲಿ ಪಡುವ ಸಂತಸ, ಅದೆಲ್ಲೋ ಗಗನ ಕುಸುಮ ಎಂಬ ಸತ್ಯದ ಅರಿವಾದಾಗ ಪಡುವ ಸಂಕಟ, ಕೊನೆಗೆ ಬದುಕೇ ಇಷ್ಟೆ ಅನ್ನುವ ಜಿಗುಪ್ಸೆಯ ಕ್ಷಣ……!!!

ಕಷ್ಟದಲ್ಲಿರುವವರಿಗೆ ಗೆಳೆಯರು ಜೊತೆಗಿರುತ್ತಾರೆ ಅನ್ನೋದು ಕೂಡಾ ಕನಸಷ್ಟೇ….ಅದೇ ಕಾರಣಕ್ಕೇ ಇರಬಹುದೇನೋ ಕವಿ ಇರುವಾಗ ಎಲ್ಲ ನೆಂಟರು ಅಂದಿದ್ದು…ನಮಗೂ ಆ ಮಾತು ಸತ್ಯ ಅಂತ ಅನ್ನಿಸದೆ ಇರೋದಿಲ್ಲ ಅಲ್ವಾ? ಅನುಭವ ಪಾಠ ಕಲಿಸುತ್ತದೆ. ಆದ್ರೆ ಕಷ್ಟಕ್ಕಾದವನೇ ನಿಜವಾದ ಗೆಳೆಯ ಅನ್ನುವ ಮಾತು ಮರೆಯುವ ಹಾಗಿಲ್ಲ… ಕೃಷ್ಣ ಸುಧಾಮನಂತಹ ಗೆಳೆಯರು ಇನ್ನೂ ಕೆಲವರಾದರೂ ಇರಬಹುದೇನೋ…!!!!!!!!!!??????????????

 

Saturday, August 18, 2012


ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ



ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೆ............  ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು ತಾಯಿಯೆ............

ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇಂದು ನಮಗೆ ಸಾಧ್ಯವಾಗುತ್ತಿದೆಯೆಂದಾದರೆ ಅದರ ಹಿಂದೆ ಭರತಮಾತೆಯ ದಾಸ್ಯದ ಬಿಡುಗಡೆಗಾಗಿ ಹೋರಾಡಿದ ಅದೆಷ್ಟೋ ಮಂದಿಯ ಶ್ರಮವಿದೆ. ಅವರು ಬಿತ್ತಿದ ಬೀಜ ಗಿಡವಾಗಿ, ಆ ಗಿಡ ಮರವಾಗಿ, ಇಂದು ನೀಡುತ್ತಿರುವ ಫಲದ ಸವಿಯನ್ನು ನಾವಿಂದು ಸವಿಯುತ್ತಿದ್ದೇವೆ. ಆದರೆ ಆ ಮರವನ್ನು ನೀರುಣಿಸಿ ಪೋಷಿಸಿ ಬೆಳೆಸಿ ಉಳಿಸುವಲ್ಲಿ ನಮ್ಮ ಕೊಡುಗೆ ಎಷ್ಟರಮಟ್ಟಿಗಿದೆ ಎಂಬುದನ್ನು ಯೋಚಿಸಲೇಬೇಕಾಗಿದೆ.

  ನಮಗಿಂದು ೬೫ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ನಮ್ಮ ದೃಷ್ಟಿಯನ್ನೊಮ್ಮೆ ಕಳೆದು ಹೋದ ದಿನಗಳ ಪುಟಗಳೆಡೆಗೆ ಹರಿಸೋಣ............ ಆ ಸ್ವಾತಂತ್ರ್ಯ ಯೋಧರಿಗೆ ನಮಿಸೋಣ.............

( ಮಾ ತುಜೆ ಸಲಾಂ…………………)
ಉತ್ತರದ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅರುಣಾಚಲದವರಗೆ ವಿಸ್ತಾರವಾಗಿ ಪಸರಿಸಿರುವ ಭರತ ಮಾತೆಯ ಅಂತರಾಳದಲ್ಲಿ ಅಡಗಿರುವ ಮಹಾಸಂಪತ್ತಿನ ಬೆಲೆಯನ್ನು ನಮ್ಮಿಂದ ಮೊದಲೇ ತಿಳಿದುಕೊಂಡಿದ್ದ ಪಾಶ್ಚಿಮಾತ್ಯರು ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ಭಾರತದೆಡೆಗೆ ಪಾದಬೆಳೆಸಿದರು. ಬಂದವರೇ ನಮ್ಮಲ್ಲಿರುವ ಲೋಪದೋಷಗಳನ್ನೇ ಬಂಡವಾಳವನ್ನಾಗಿಸಿಕೊಂಡು ಇಡೀ ಭಾರತವನ್ನೇ ತಮ್ಮದಾಗಿಸಿಕೊಳ್ಳ ಹೊರಟರು. ಭಾರತಾಂಬೆಯ ಮುಂದೆ ಆ ಖಾಲದಲ್ಲಿದ್ದ ಸವಾಲುಗಳು ಒಂದಲ್ಲ ಎರಡಲ್ಲ ಹತ್ತು ಹಲವು............................

              ಉಭಯ ಸಂಕಟದೊಳಗೆ ತೊಳಲಾಡುತ್ತಿದ್ದ ಮಹಾತಾಯಿ ಭರತಮಾತೆಯನ್ನು ರಕ್ಷಿಸಬೇಕಾದ ಆಕೆಯ ಮಾನ ಪ್ರಾಣಗಳೆರಡನ್ನೂ ಉಳಿಸಬೇಕಾದ ಅನಿವಾರ್ಯತೆ ತಲೆದೋರಿತು. ಬಡವ ಬಲ್ಲಿದ ಮೇಲು ಕೀಳು, ಸ್ಪ್ರಷ್ಯ ಅಸ್ಪ್ರಷ್ಯ, ಮೊದಲಾದ ಹತ್ತು ಹಲವು ಸಮಸ್ಯೆಗಳೊಂದಿಗೆ ಮೂಲಭೂತ ಅಗತ್ಯವನ್ನು ಪೋರೈಸುವುದೂ ಕಷ್ಟ ಎಂಬ ಸ್ಥಿತಿ ನಮ್ಮ ಪಾಲಿನದ್ದಾಗಿತ್ತು...... ಇವೆಲ್ಲವುಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಪ್ರತ್ಯಕ್ಷವಾಗಿ ಬ್ರಿಟಿಷರ ಪರೋಕ್ಷವಾಗಿ ಈ ಎಲ್ಲಾ ಎಡರುತೊಡರುಗಳ ವಿರುದ್ಧದ ಹೋರಾಟವೇ ಸ್ವಾತಂತ್ರ್ಯ ಸಂಗ್ರಾಮವಾಯಿತು...............
ಭೂತಕಾಲದ ಕುರಿತು ಅರಿವಿರದೆ ವರ್ತಮಾನವನ್ನು ಲೆಕ್ಕಿಸದೆ ಮುಂದೆ ಬರುವ ಭವಿಷ್ಯದ ಕುರಿತು ಚಿಂತನೆಯಲ್ಲಿ ತೊಡಗಿದರೇನು ಫಲ.............. ನಮ್ಮ ಮಾನ ಪ್ರಾಣಗಳ ರಕ್ಷಣೆ ನಮ್ಮ ಹೊಣೆ ಎಂದರಿತು ೧೮೫೭ರಲ್ಲಿ ಬ್ರಿಟಿಷರ ಅಟ್ಟಹಾಸವನ್ನು ಹತ್ತಿಕ್ಕಲು ನಡೆದ ಮೊದಲ ಪ್ರಯತ್ನದ ಕಿಡಿ ಹೊತ್ತಿಸಿದವರಲ್ಲಿ ಒಬ್ಬ ಮಹಿಳೆ ಪ್ರಮುಖಳು. ನಂಬುವುದಕ್ಕೆ ಅಸಾಧ್ಯವಾದರೂ ನಂಬಲೇಬೇಕಾದ ಸತ್ಯವಿದು. ಬಿಟ್ಟುಬಿಡು ರಾಜ್ಯವ ಎಂದವರಿಗೆ ತಾಕತ್ತಿದ್ದರೆ ಕಾದಾಡಿ ಪಡೆ ರಾಜ್ಯವ ಎಂದು ದಿಟ್ಟತನದಿಂದ ಸವಾಲೆಸೆದ ವೀರವನಿತೆ...........ಬ್ರಿಟಿಷರು ಬಿಚ್ಚಹೊರಟ ಬಾಲಕ್ಕೆ ಕಿಚ್ಚುಹಚ್ಚಿದ ಆ ಇಪ್ಪತ್ತೆರಡರ ದಿಟ್ಟಹೆಣ್ಣೇ ಝಾನ್ಸೀರಾಣಿ ಲಕ್ಷ್ಮೀ ಬಾಯಿ.......

ಮೈ ಆಜಾದ್ ಹೂಂ.... ಆಜಾದ್ ಹೀ ರಹೂಂಗಾ.......... ಎಂದು ಘೋಷಿಸಿದ ಚಂದ್ರಶೇಖರ ಆಜಾದ್, ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬುದಾಗಿ ಸಾರಿ ಹೇಳಿದ ಬಾಲಗಂಗಧರ ತಿಲಕ್, ಹೋರಾಡಿ ಜೀವತೆತ್ತ ಭಗತ್ ಸಿಂಗ್, ಸಾವರ್ಕರ್, ಸಂಗೊಳ್ಳಿ ರಾಯಣ್ಣ, ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ ನಿಲ್ಲದಿರಿ ಎಂದು ಸಾರಿ ಯುವಕರನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದ, ಅಹಿಂಸೆಯಿಂದಲೂ ಗೆಲುವು ಸಾಧ್ಯ ಇದೆ ಎಂದ ಮಹಾತ್ಮಾಗಾಂಧಿ ಹೀಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿದವರು ಒಬ್ಬರಲ್ಲ, ಇಬ್ಬರಲ್ಲ, ಹಲವಾರು ಮಂದಿ................

ಇವರೆಲ್ಲಾ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಇಂದಿಗೂ ನಮ್ಮೆದುರಿಗಿದೆ. ಹಾಲಾಹಲವ ಕುಡಿದು ಅಮೃತದ ಸವಿಯನ್ನು ಉಣಬಡಿಸಿದ ವೀರಜನರ ಬದುಕಿನ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇವೆಲ್ಲವನ್ನು ಅರಿತು ಇಂದು ನಾವು ವಿದ್ಯಾವಂತರಾಗಿದ್ದೂ ನಮ್ಮದಲ್ಲ ಎಂಬಂತೆ, ನೋಡಿಯೂ ನೋಡದಂತೆ, ಎಚ್ಚರದಲ್ಲಿದ್ದೂ ನಿದ್ರಿಸಿದಂತೆ, ಕಣ್ಣಿದ್ದೂ ಕುರುಡರಂತೆ ನಟಿಸುತ್ತಿದ್ದೇವೆ ಎನ್ನುವ ಸ್ಂಗತಿ ನಿಷ್ಠುರ ಸತ್ಯ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ............ ಎಂದ ಮಾತು ಇಂದಿಗೂ ಜಗದ ತುಂಬೆಲ್ಲಾ ಅನುರಣಿಸುತ್ತಿದೆಯಾದರೂ ಯಾರಕಿವಿಗೂ ಇದು ಕೇಳಿಸುತ್ತಿಲ್ಲವೇ?  ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ ನಿಲ್ಲದಿರಿ ಎಂದ ವಿವೆಕಾನಂದರ ಮಾತನ್ನು ನಾವು ಮರೆತಿದ್ದೇವೆಯೆ?


ಸ್ವಾತಂತ್ರ್ಯ ಬಂದಿದೆ ಎಂದಾಗ ಆ ದಿನಗಳಲ್ಲಿ  ಆಚರಣೆಯ ಕಲ್ಪನೆಗಿಂತ ಮುಂದೆ ಉತ್ತಮ ರಾಷ್ಟ್ರ ಕಟ್ಟುವ ಕಲ್ಪನೆ ಮಹತ್ವದ್ದಾಗಿತ್ತು....... ಆದರೆ ಇಂದಿನ ಸ್ವತಂತ್ರ್ಯ ದಿನಾಚರಣೆ ಆಗಸ್ಟ್ ೧೫ ಕ್ಕೆ ಮಾತ್ರ ಸೀಮಿತವಾಗಿದೆಯೇ? ಇದು ಹೊಸ ಬಟ್ಟೆ ತೊಟ್ಟು ರಾಷ್ಟ್ರ ಧ್ವಜಕ್ಕೆ ವಂದಿಸಿ ಸಿಹಿತಿಂಡಿ ತಿಂದು ಸಂಭ್ರಮಿಸುವುದಕ್ಕಷ್ಟೇ ಮೀಸಲಾಗಬೇಕೆ? ಆಡಂಬರದ ಬದುಕು ನಮ್ಮದಾಗಬೇಕೆಂದು ಬಯಸಿದ್ದೇವೆಯೇ ವಿನಹ ನಮ್ಮ ಇಂದಿರುವ ಸುಖದ ಹಿಂದಿರುವ ಕಷ್ಟಗಳನ್ನು, ಹರಿಸಿದ ರಕ್ತದ ಹೊಳೆಯನ್ನು ನೆನಪಿಸುತ್ತಿಲ್ಲವಲ್ಲ?
ಭಾರತ ಸ್ವತಂತ್ರವಾಗಿದೆ ಎಂದುಕೊಂಡು ೬೪ ವರ್ಷಗಳು ಕಳೆದಿವೆ.... ಆದರೂ ಅಲ್ಲಿ ಇಲ್ಲಿ ಕಂಡುಬರುವ, ತಲೆಯೆತ್ತುವ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕೀತೆ? ಭರತಮಾತೆಯ ಒಡಲಾಳದ ಆರ್ತನಾದ ನಮ್ಮ ನಿಮ್ಮೆಲ್ಲರ ಕಿವಿಗಳಿಗೆ ನಾಟೀತೇ? ಆಕೆಗೆ ಮುಕ್ತಿ ಎಲ್ಲಿ? ಹೇಗೆ? ಮತ್ತು ಎಂದು? ಯೋಚಿಸಿ ಅತ್ತ ಹೆಜ್ಜೆ ಹಾಕೋಣವೇ? ಇವೆಲ್ಲವಕ್ಕೂ ಉತ್ತರ ಪರಿಹಾರಗಳು ಬೇಗನೆ ಸಿಗುವಂತಾದೀತೆ? ಹಾಗಾದಾಗ ಗಾಂಧೀಜಿಯವರ ಕನಸಿನ ಕಲ್ಪನೆಯ ರಾಜ್ಯದ ಸಾಕ್ಷಾತ್ಕಾರವಾದೀತು.. ಆ ದಿಕ್ಕಿನೆಡೆಗೆ ಸಾಗುವ ಮನೋಧರ್ಮ ನಮ್ಮೆಲ್ಲರದ್ದಾಗಲಿ.................





Monday, January 16, 2012

ನಮ್ಮ ದೇಶ ನಮ್ಮ ಜನ............


 ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು, ಆ ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು............... ಎಂಬುದಾಗಿ ಹಾಡಿದ ಯೋಧ ಸನ್ಯಾಸಿ ಸ್ವಾಮಿ ವಿವೇಕಾನಂದರು.... ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಯುವಜನತೆಗೆ ಕರೆ ನೀಡಿದರು. ಜನ ಸೇವೆಯೇ ಜನಾರ್ಧನನ ಸೇವೆ ಅಂದುಕೊಂಡಿದ್ದ ಅವರು ದರಿದ್ರ ನಾರಾಯಣೋ ಭವಃ ಎಂದರು. ಸತ್ಯ ಶಕ್ತಿಯನ್ನು ಹೆಚ್ಚಿಸಬೇಕು, ಬೆಳಕನ್ನು ತರಬೇಕು, ಹೊಸ ಚೇತನವನ್ನು ತುಂಬಬೇಕು, ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು, ನಾವು ದೇವರ ಮಕ್ಕಳು, ಜೀವನದಲ್ಲಿ ಬರುವ ಸೋಲುಗಳನ್ನು ಲೆಕ್ಕಿಸಬಾರದು. ಸೋಲುಗಳು ಸಹಜ. ಅವೇ ಜೀಅನದ ಸೊಬಗು, ಹೋರಾಟಗಳು ಸೋಲುಗಳು ಇಲ್ಲದೆ ಇರುತ್ತಿದ್ದರೆ ಜೀವನದಲ್ಲಿ ಮಾಧುರ್ಯವೇ ಇರುತ್ತಿರಲಿಲ್ಲ, ಹಾಗಾಗಿ ಸಣ್ಣ ಸೋಲುಗಳನ್ನು ಲೆಕ್ಕಿಸದೆ, ಸಾವಿರ ಸಲ ಸೋತರೂ ಮರಳಿ ಯತ್ನ ಮಾಡಬೇಕು,  ಎಂಬಿತ್ಯಾದಿ ಮಾತುಗಳಿಂದ ಯುವಜನರನ್ನು ಹುರಿದುಂಬಿಸಿ ಸದಾ ಎಚ್ಚರಿಸಿ ದಾರಿ ತೋರಿದವರು ಸ್ವಾಮಿ ವಿವೇಕಾನಂದರು.
 ಇಂತಹ ಪುಣ್ಯ ಪುರುಷರು ಭರತ ಮಾತೆಯ ಒಡಲಲ್ಲಿ ಜನಿಸಿ ಮತೃಭೂಮಿಯ ಕೀರ್ತಿಯನ್ನು ಬಾನೆತ್ತರಕ್ಕೆ ಏರುಸುವುದಲ್ಲದೆ, ವಿಶ್ವದೆಲ್ಲೆಡೆಗೆ ಪಸರಿಸಿದ್ದಾರೆ...
        ನಮ್ಮ ಯುವಜನತೆಯ ಶಕ್ತಿ ನಿಜಕ್ಕೂ ಸಮುದ್ರದ ಅಲೆಗಳಷ್ಟು ಬಲಿಷ್ಠ, ಆನೆಯಷ್ಟು ಬಲದಂತಹ ಬಲ, ಒಂದಾಗಿ ಉತ್ತಮ ಮಾರ್ಗದಲ್ಲಿ ಎಲ್ಲರೂ ಬೆರೆತು ದುಡಿದರೆ ಭರತ ಮಾತೆಯ ಸಿರಿವಂತಿಕೆಯಲ್ಲಿ ಕೊರತೆಯೇನಿದೆ? ಸಂಸ್ಕೃತಿಯಲ್ಲೋ, ಕಲೆಯಲ್ಲೋ, ಆರ್ಥಿಕತೆಯಲ್ಲೋ, ವೈಜ್ಞಾನಿಕತೆಯಲ್ಲೋ,.........................? ಖಂಡಿತವಾಗಿಯೂ ಇಲ್ಲ..... ಒಕ್ಕೊರಲಿನಿನ್ದ ಮೊಳಗಿದ ಧ್ವನಿ ಎಂಟು ದಿಕ್ಕುಗಳಲ್ಲೂ ಮರ್ಧನಿಸಲು ಸಾಧ್ಯ....... ಹಾಗೆಯೆ ಹಲವು ಬಲಿಷ್ಟ  ಕೈಗಳಿಂದ ಮಾತ್ರ ಬಲಿಷ್ಟ ರಾಷ್ಟ್ರದ ನಿರ್ಮಾಣ ಸಾಧ್ಯವಲ್ಲವೇ? ಹಾಗಾಗಿ, ಒಕ್ಕೊರಲಿನಿಂದ....... ಮೊಳಗಲಿ ಜಯ ಘೋಷ............. ಭಾರತಾಂಬೆಗೆ ಜೈ..................

Tuesday, January 3, 2012

ಹೊಸ ವರ್ಷದ ಹಾರ್ದಿಕ ಶುಭಾಶಯಗಳು