Friday, December 28, 2012


ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ …… ಇದು ಕವಿವಾಣಿ. ಇಂದಿನ ಅನುದಿನದ ನಡವಳಿಕೆಗಳು ಆಗುಹೋಗುಗಳನ್ನೊಮ್ಮೆ ಅವಲೋಕಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸದಿರದು……. ವೈಜ್ನಾನಿಕಯುಗ ಇದು…. ಕಾಲ ಬದಲಾಗಿದೆ…….. ಮೊದಲಿನಂತಿಲ್ಲ ಎಂದು ಗೋಳಿಡುತ್ತಿರುವ ಅಜ್ಜಿ ತಾತ ಕೊಡುವ ಪ್ರೀತಿ, ಅಪ್ಪ ಅಮ್ಮ ಕೊಡುತ್ತಿದ್ದ ಪ್ರೀತಿ, ಅಕ್ಕ ತಂಗಿಯರ ಪ್ರೀತಿ, ಅಣ್ಣ ತಮ್ಮಂದಿರ ಪ್ರೀತಿ, ಬಹುಶಃ ದೀಪ ಹಿಡಿದು ಹುಡುಕಿದರೂ ಸಿಗದ ಕಾಲಘಟ್ಟದಲ್ಲಿ ನಾವಿದ್ದೇವೆ.

ಕಾಲ ಕೆಟ್ಟಿದೆ ಎಂದು ಬೊಬ್ಬೆ ಹೊಡೆಯುತ್ತೇವೆ, ಕೆಟ್ಟದ್ದು ಕಾಲವೇ? ಇಲ್ಲ ನಾವೇ? ಯೋಚಿಸಬೇಕಾಗಿದೆ!..........ಅಪ್ಪ ಮಗಳ ಸಂಬಂಧ, ಅಣ್ಣ ತಂಗಿಯ ಸಂಬಂಧಗಳು ಎತ್ತ ಸಾಗುತ್ತಲಿವೆ………. ಕಾಮುಕರ ಕಣ್ಣಿಗೆ ಪುಟ್ಟ ಮಗುವಿನ ಮುಗ್ಧತೆಯೂ ಕಾಣದಾಗಿದೆ ಎಂದ ಮೇಲೆ ನಮ್ಮ ಸಮಾಜದ ಭೀಕರತೆಯನ್ನು ಅಳೆಯಲು ಬೇರೆ ಮಾಪನದ ಅಗತ್ಯ ಇರಲಿಕ್ಕಿಲ್ಲ ಅಲ್ಲವೆ? ರಾಮಾಯಣದ ರಾಮ ಸೀತೆಯರ ಆದರ್ಶ ಕಂಡು ಓದಿ ಕಲಿತು ತಿಳಿದ ದೇಶವೆ ಇದು? ಹತ್ತು ಹಲವು ಸಾಧು ಸಂತರು ಹುಟ್ಟಿ ಬಾಳಿದ ನಾಡೆ ಇದು? ಕಥೆಗಳಲ್ಲಿ ಕೇಳಿದ, ಪುರಾಣಗಳಲ್ಲಿ ಓದಿದ ಸಾಮಾಜಿಕ ನೀತಿ ನಿಯಮಗಳು, ರೀತಿರಿವಾಜುಗಳು, ಮೌಲ್ಯಗಳು ಬಿರುಗಾಳಿಗೆ ಸಿಲುಕಿ ದಿಕ್ಕೆಟ್ಟಿವೆಯೆ? ತ್ಸುನಾಮಿಗೆ ಸಿಲುಕಿ ಕೊಚ್ಚಿ ಹೋಗಿರಬಹುದೆ? ಅಥವ ಪ್ರಳಯ ಎಂದರೆ ಇದುವೇ?

Tuesday, December 11, 2012


ಏಕೆ ಕಾಡುವೆ ನನ್ನನು ಹೀಗೆ……………….


ಎಷ್ಟೋ ಸಲ ಬದುಕೇ ವಿಚಿತ್ರ ಅಂತ ನನ್ನ ಹಾಗೆ ನಿಮಗೂ ಅನ್ನಿಸಿರಬಹುದೆನೋ……. ಅದೆಲ್ಲೋ ಒಂದು ಕಡೆ ಕವಿ ಏಕೆ ಕಾಡುವೆ ನನ್ನನು ಹೀಗೆ ಅಂದಾಗ ಅದು ಹಾಸ್ಯವಾಗಿ ಕಂಡಿತ್ತು………. ಆದ್ರೆ ನಮ್ಮ ಅನುಭವಕ್ಕೆ ಅದು ಬಂದಾಗಲೇ ನಿಜವಾದ ಅರ್ಥದ ಅರಿವಾಗೋದು ಅಲ್ವಾ? ಆದ್ರೆ ಕವಿಯ ಕಲ್ಪನೆಯ ಕಾಟ ಅದ್ಯಾವುದೊ ಗೊತ್ತಿಲ್ಲ…….ನಮ್ಮನ್ನು ಕಾಡುವ ಕಾಟಗಳದೆಷ್ಟೋ….

ಕನಸು ಕಾಣೋದು ತಪ್ಪೇ? ಹಾಗಂತ ಕನಸೇ ಇಲ್ಲದ ಬದುಕು ಬದುಕೇ? ಕನಸೇ ತಾನೆ ಸಾಧನೆಗಳಿಗೆ ಸ್ಫೂರ್ತಿ? ಆದ್ರೆ ಕನಸೇ ಬದುಕೇ? ಅದೂ ಅಲ್ಲವೆಂದಾದ್ರೆ ಕನಸು ಕಾಣೋದಾದ್ರೂ ಹೇಗೆ? ಬರೀ ಪ್ರಶ್ನೆ ಪ್ರಶ್ನೆ ಪ್ರಶ್ನೆ……….. ಬದುಕ ತುಂಬೆಲ್ಲಾ ಪ್ರಶ್ನೆ, ಕೊನೆಗೆ ಬದುಕೇ ಪ್ರಶ್ನೆಯಾಗಿ ಕಾಡೀತು ಕೂಡಾ!!!!!!!!!!!!!!!!!!!!!!!!!!!!

ಒಂದೊಮ್ಮೆ ನಡೆದ ಮುಂದೆ ನಡೆಯಬಹುದಾದ ನಡೆಯಬೇಕೆಂದಿರುವ ಎಲ್ಲಾ ಘಟನೆಗಳು ಕನಸುಗಳೆ…. ಹಲವು ರಾತ್ರಿ ಕಂಡಿದ್ದಿರಬಹುದು, ಇನ್ನು ಕೆಲವು ಹಗಲು…… ಅಷ್ಟೆ!!!!! ಕಲ್ಪನೆಗಳೆಲ್ಲ ಒಂದಿಲ್ಲೊಂದು ದಿನ ಒಂದೊಂದು ರೂಪದಲ್ಲಿ ಕನಸುಗಳಾಗಿ ಆ ಲೋಕದ ತುಂಬೆಲ್ಲಾ ವಿಹರಿಸಿ ಬರುವುದು, ನಿಜ ಎಂದಾದಲ್ಲಿ ಪಡುವ ಸಂತಸ, ಅದೆಲ್ಲೋ ಗಗನ ಕುಸುಮ ಎಂಬ ಸತ್ಯದ ಅರಿವಾದಾಗ ಪಡುವ ಸಂಕಟ, ಕೊನೆಗೆ ಬದುಕೇ ಇಷ್ಟೆ ಅನ್ನುವ ಜಿಗುಪ್ಸೆಯ ಕ್ಷಣ……!!!

ಕಷ್ಟದಲ್ಲಿರುವವರಿಗೆ ಗೆಳೆಯರು ಜೊತೆಗಿರುತ್ತಾರೆ ಅನ್ನೋದು ಕೂಡಾ ಕನಸಷ್ಟೇ….ಅದೇ ಕಾರಣಕ್ಕೇ ಇರಬಹುದೇನೋ ಕವಿ ಇರುವಾಗ ಎಲ್ಲ ನೆಂಟರು ಅಂದಿದ್ದು…ನಮಗೂ ಆ ಮಾತು ಸತ್ಯ ಅಂತ ಅನ್ನಿಸದೆ ಇರೋದಿಲ್ಲ ಅಲ್ವಾ? ಅನುಭವ ಪಾಠ ಕಲಿಸುತ್ತದೆ. ಆದ್ರೆ ಕಷ್ಟಕ್ಕಾದವನೇ ನಿಜವಾದ ಗೆಳೆಯ ಅನ್ನುವ ಮಾತು ಮರೆಯುವ ಹಾಗಿಲ್ಲ… ಕೃಷ್ಣ ಸುಧಾಮನಂತಹ ಗೆಳೆಯರು ಇನ್ನೂ ಕೆಲವರಾದರೂ ಇರಬಹುದೇನೋ…!!!!!!!!!!??????????????