Sunday, October 30, 2011

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........!?

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........?!  ಇಂದುಗಳು ನಾಳೆಗಳು ಹಿಂದೆ ಹೀಂದೋಡುವುವು ತುದಿ ಮೊದಲ ಕಾಣದನಂತತೆಯ ಕಡೆಗೆ.............ಕಾಲಚಕ್ರ ನಿರಂತರವಾಗಿ ಉರುಳುತ್ತಲೇ ಇರುತ್ತದೆ. ಓಡುವ ಕಾಲದೊಂದಿಗೆ ನಮಗರಿವಿಲ್ಲದೆಯೇ ಓಡುವ ಯಂತ್ರಗಳು ನಾವೂ ಆಗಿಬಿಟ್ಟಿದ್ದೇವೆ! ಬಾಳ ಕಡಲಲ್ಲಿ ಬಂದಪ್ಪಳಿಸುವ ತೆರೆಗಳಿಗೆ ಮೈಯೊಡ್ಡಿ, ಬಿರುಗಾಳಿ ಬರಸಿಡಿಲುಗಳಿಗೆ ಕೂಡಾ ವಿಚಲಿತರಾಗದ ಸ್ಥಿತಪ್ರಜ್ಞರಾಗಿ, ಹಳತುಗಳ ನೆನಪುಗಳೊಂದಿಗೆ ಹೊಸತುಗಳೆಡೆಗೆ ಅನಿವಾರ್ಯವೆಂಬಂತೆ ಧಾವಿಸುತ್ತಿದ್ದೇವೆ! ಮನೆ ಮನದ ತುಂಬೆಲ್ಲಾ ಹೊರಲಾರದಷ್ಟಿರುವ ಭಾರವನ್ನು ಹೊತ್ತುಕೊಂಡೂ ಸಮಾಜದ ಮುಂದೆ ನಗುವಿನ ಮುಖವಾಡದ ಸಂತೋಷಿಗಳಾಗಿದ್ದೇವೆ!? ಏನಿದೆ ಏನಿಲ್ಲ ಎಂಬುದಾಗಿ ಇತರರು ನಮ್ಮನ್ನು ಕಂಡು ಹಲುಬುವಷ್ಟು ಸುಖಿಗಳಾಗಿದ್ದೇವೆ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೆ ಜೀವನ ಎಂಬುದಾಗಿ ಕವಿಯೂ ಸ್ವಾನುಭವದಿಂದಲೇ ಹೇಳಿರಬಹುದಷ್ಟೇ!? ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದ ಹಿರಿಯರು, ಶಿವಶರಣರು, ದಾಸವರೇಣ್ಯರು ಕೂಡ ಬಹುಶಃ ಬದುಕಿದ್ದು ನಾಳಿನ ಬದುಕಿನ ಸುಂದರ ಕಲ್ಪನೆಯೊಂದಿಗೆ ಅಥವಾ ಹಗಲೋ ಇರುಳೋ ಅರಿತೋ ಅರಿಯದೆಯೋ ಕಂಡ ಕನಸುಗಳೊಂದಿಗೆಯೇ...........ಅಷ್ಟಕ್ಕೂ ಅವರೇನು ಅಲ್ಪತೃಪ್ತರಾಗಿರಬಹುದೇ?ಒಬ್ಬ ವ್ಯಕ್ತಿಯ ಬದುಕು ಹುಟ್ಟಿದಂದಿನಿಂದ ಸಾಯುವವರೆಗೂ ಸುಖಮಯವಾಗಿಯೇ ಇದ್ದೀತೆ? ಅಥವ ಇರಬೇಕೆಂದು ಬಯಸಿದರೆ ಅದು ಅತಿ ಆಸೆಯೋ ಸ್ವಾರ್ಥವೋ ಎಂದು ಕರೆಯಿಸಿಕೊಳ್ಳದೇನು?! ಹಾಗೆ ಹೇಳುವುದಾದರೆ ಸುಖ ಎಂಬುದನ್ನು ನಿರ್ಧಿಷ್ಟವಾಗಿ ವ್ಯಾಖ್ಯಾನಿಸುವುದಕ್ಕಾದೀತೇ? ಕಷ್ಟ ಸುಖ, ನೋವು ನಲಿವು, ಸಂತೋಷ ದುಃಖ, ಎಲ್ಲವೂ ಜೀವನದ ಅವಿಭಾಜ್ಯ ಅಂಗಗಳೆ... ಇವೆಲ್ಲವುಗಳ ಸಂಮಿಶ್ರ ಪಾಕದಲ್ಲೇ ಜೀವನದ ಸ್ವಾರಸ್ಯ ಅಡಗಿದೆ. ಕಷ್ಟದ ಅರಿವಾಗದ ವ್ಯಕ್ತಿಗೆ ಸುಖದ ಅನುಭವವಾಗುವುದಾದರೂ ಹೇಗೆ? ನೋವೇ ಗೊತ್ತಿಲ್ಲದವನಿಗೆ ನಲಿವಿನ ಅರಿವೆಲ್ಲಿಯ ಮಾತು!? ದುಃಖವೇ ಇಲ್ಲದೆ ಸಂತೋಷದ ಅರಿವಾಗುವುದಾದರೂ ಹೇಗೆ? ಕಹಿ ಎಂದರೇನೆಂದು ತಿಳಿದರೇ ತಾನೆ ಸಿಹಿಯನ್ನನುಭವಿಸುವುದು ಸಾಧ್ಯವಾಗುವುದು? ಕಳೆದುಕೊಂಡ ನಂತರವೇ ಅದರ ಬೆಲೆಯ ಅರಿವಾಗುವುದು............!? ಮೊನ್ನೆ ನನ್ನ ಆತ್ಮೀಯ ಸಹೋದ್ಯೋಗಿಯೊಬ್ಬರಲ್ಲಿ ಮಾತನಾಡುತ್ತಿದ್ದೆ
ಒಂದಂತು ಸತ್ಯ. ಮನುಷ್ಯ ಅಲ್ಪತೃಪ್ತನಂತೂ ಅಲ್ಲವೇ ಅಲ್ಲ. ಅಥವ ಹೌದೆಂದಾದರೆ ಆತ ಸಾಮಾನ್ಯ ಮನುಷ್ಯನೆನಿಸಿಕೊಳ್ಳಲಾರ. ಮಹಾತ್ಮನಾಗಿಬಿಡುತ್ತಾನೆ ಅಲ್ಲವೆ? ತಾಯಿ ತನ್ನ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆದುಕೊಳ್ಳಬೇಕಂದುಕೊಳ್ಳುವುದು, ಸಹೋದ್ಯೋಗಿಗಳು ಎಲ್ಲರಿಗಿಂತ ಹೆಚ್ಚಾಗಿ ನಾವೇ ಗುರುತಿಸಿಕೊಳ್ಳಬೇಕಂದುಕೊಳ್ಳುವುದು, ಎಲ್ಲರಿಗಿಂತ ಸುಂದರಿಯಾಗಿ ನಾನೇ ಮೆರೆಯಬೇಕಂದುಕೊಳ್ಳುವುದು, ಎಲ್ಲರಿಗಿಂತ ಹೆಚ್ಚಿನ ಸಂಪತ್ತು ತಮ್ಮದಾಗಬೇಕೆಂದುಕೊಳ್ಳುವುದು, ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಬಗೆಯಲ್ಲಿ ಪರಿತಪಿಸುವವರು ನಾವು...... ಕಡಿಮೆ ಅಂಕ ಬಂತೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಬಯಸಿದ ಹುಡುಗ ಅಥವಾ ಹುಡುಗಿ ಸಿಗಲಿಲ್ಲವಲ್ಲ ಎಂದುಕೊಂಡು ಸಾಯ ಹೊರಟದ್ದು, ಐಶಾರಾಮದ ಬದುಕಿನ ಕನಸು ಕಂಡು ಮಾಡಿದ ಸಾಲ ತೀರಿಸಲಾರದೆ ಮನನೊಂದು ಜೀವಕಳೆದುಕೊಳ್ಳುವ ನಿರ್ಧಾರ ಮಾಡಿದ್ದು, ಎಲ್ಲಾ ನಮ್ಮ ಕಣ್ಣಮುಂದಿರುವ ಸಾಕ್ಷಿಗಳು...... ಸಹನೆಯೇ ಇಲ್ಲದ ಬದುಕು ನಮ್ಮದಾಗಿ ಬಿಟ್ಟಿದೆ. ತಾಳ್ಮೆ ಇಲ್ಲದ ದಿನಗಳು ನಮ್ಮದಾಗುತ್ತಲಿವೆ. ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ, ಮನುಷ್ಯ ಸಂಬಂಧ ಎತ್ತ ಸಾಗುತ್ತಲಿದೆ.... ಅಂದರೆ ದುಡ್ಡಿನತ್ತ... ಒಡವೆಗಳತ್ತ... ಇನ್ನೆತ್ತೆತ್ತಲೋ...... ನಮ್ಮ ದೃಷ್ಟಿ ಆಕಾಶದೆಡೆಗಿದೆಯೇ ಹೊರತು ಭೂಮಿಯೆಡೆಗಲ್ಲ...!
ಭಾವನೆಗಳಿಗೆ ಬೆಲೆಯೆಲ್ಲಿದೆ? ಇತರರ ಮೇಲೆ ದಬ್ಬಾಳಿಕೆ ಮಾಡಿ, ಇತರರಿಂದ ಕಸಿದುಕೊಂಡು, ಇತರರ ಭಾವನೆಗಳ ಮೇಲೆ ಕುದುರೆ ಸವಾರಿ ಮಾಡಿ ಕ್ರೂರಿ ಎನಿಸಿಕೊಳ್ಳುವುದಕ್ಕಿಂತ ಭಾವಜೀವಿಯಾಗಿ ಅಲ್ಪತೃಪ್ತರಾಗಿ ಸುಮ್ಮನಾಗಿ ಬಿಡುವುದೇ ಒಳಿತಲ್ಲವೆ?ಮಾನವ ಸಂಬಂಧಗಳಿಗೆ ಬೆಲೆ ಕೊಡುವ, ತನ್ನಂತೆ ಪರರ ಬಗೆವ, ಪರೋಪಕಾರಿ ಮನೋಧರ್ಮವನ್ನು ಬೆಳೆಸಿಕೊಳ್ಳುವ, ಎಲ್ಲರ ಕಷ್ಟ ಸುಖಗಳಲ್ಲಿ ಸ್ಪಂದಿಸುವ, ಸಮಾನ ಮನಸ್ಕರಾಗಿ ಹೊಂದಿಕೊಂಡು ಬಾಳುವ, ದಿನಗಳು ನಮ್ಮವಾದಾವೇ? ಬಂದೇ ಬರುತಾವ ಕಾಲ ಅಂತ ಹಾಡಿದ್ದಕ್ಕೆ ಸಾರ್ಥಕ ಅನ್ನುವ ಕಾಲ ....... ಬೇಗನೆ ಹತ್ತಿರವಾದೆತೇ? ..... ತಲ್ಲಣಿಸದಿರು ಕಂಡ್ಯ ತಾಳು ಮನವೇ....... ಕಾಯಬೇಕಷ್ಟೇ.....................!? ಏನಂತೀರಿ.................................
....... ಮಾತು ಮುಂದುವರಿದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದರೂ ಕೊನೆಗೊಂಡದ್ದು ಅಲ್ಲೇ...... "ಎಲ್ಲ ನಿನ್ನ ಲೀಲೆ ತಾಯೆ ........ ಎಲ್ಲ ನಿನ್ನ ಮಾಯೆ" ಎನ್ನುವಲ್ಲೇ........... ಹೀಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಹರಟುವಾಗಲೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆಗಳನ್ನೆ ಹೇಳುವುದುಂಟು. ಎಲ್ಲರೂ ಒಟ್ಟಾಗಿ ಪರಿಹಾರಗಳ ಬಗೆಗೂ ಆಲೋಚಿಸುವುದುಂಟು. ಎಲ್ಲಾ ಮುಗಿದು ನಂತರ ಮಾತುಗಳನ್ನು ಮೆಲುಕು ಹಾಕುವಾಗ ಹಲವಾರು ಪ್ರಶ್ನೆಗಳು ಕಾಡತೊಡಗುತ್ತವೆ. ಆ ಪ್ರಶ್ನೆಗಳೊಂದಿಗೆ ಹಿರಿಯರೊಬ್ಬರನ್ನು ಮಾತನಾಡಿಸಿದಾಗ "ಯಾವಾಗಲೂ ಪ್ರಶ್ನೆಗಳನ್ನೇ ಯೋಚಿಸಹೊರಟರೆ ಪ್ರಶ್ನೆ ಹಾಗೇ ಉಳಿದು ಬಿಡುತ್ತದೆ... ಬಂದದ್ದನ್ನು ಬಂದ ಹಾಗೆಯೆ ಎದುರಿಸಿಕೊಂಡು ಹೋದರಾಯಿತು ಬಿಡು" ಎಂದು ಸಮಾಧಾನ ಮಾಡುತ್ತಾರೆ. ಅನುಭವದ ಮತಾಗಿರುವುದರಿಂದ ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯ ಅಲ್ಲವೆ?

6 comments:

  1. ತೃಪ್ತಿ.
    ಈ ಒಂದು ಶಬ್ದಕ್ಕೆ ಎಷ್ಟೊಂದು ಹಂತಗಳು..
    ಬಾಯಾರಿದವಗೆ ನೀರು ಸಿಕ್ಕಿದಾಗ ತೃಪ್ತಿ,
    ನೀರು ಕುಡಿದ ಮೇಲೆ ತೃಪ್ತಿ ನೀರಿನಲ್ಲಿಲ್ಲ-ಅನ್ನದಲ್ಲಿದೆ.
    ಅರೆ ಹೊಟ್ಟೆ ತುಂಬಿದ ಮೇಲೆ-ಮೃಷ್ಟಾನ್ನದಲ್ಲಿ,
    ಆನಂತರ ಸಂಪತ್ತಿನಲ್ಲಿ, ಆನಂತರ ಮತ್ತೊಂದರಲ್ಲಿ.. ಮಗದೊಂದರಲ್ಲಿ..
    ಕೊನೆಗೆ ಅನುಭವಿಸಿದಷ್ಟು ಅನುಭವಿಸಿದಷ್ಟು ತೃಪ್ತಿಯ ಜಾಗದಲ್ಲಿ ಅತೃಪ್ತಿಯೇ ಹೆಚ್ಚಾಗುತ್ತಾ ಹೋಗುತ್ತದೆ...
    ಮನದ ಎಲ್ಲ ಹೊಯ್ದಾಟಗಳಿಗೆ ನಮ್ಮೊಳಗೇ ಇದೆ ಉತ್ತರ...

    ReplyDelete
  2. ಯಾವುದಕ್ಕಾದರೂ ಕಾಯಲೇ ಬೇಕು...

    ReplyDelete
  3. ನೀವು ಹೇಳುವುದೇನೋ ನಿಜ. ಆದರೆ, ಇಲ್ಲಿ ನಮಗೆ ನಿರ್ದಿಷ್ಟವಾಗಿ ಅರ್ಥವಾಗಬೇಕಾಗಿರುವುದು ಯಾವುದು ಸುಖ, ಮತ್ತೆ ಯಾವುದು ನೆಮ್ಮದಿ ಎಂಬುದು. ಸುಖವನ್ನು ಅರಸಿಕೊಂಡು ಹೋದಂತೆ ಇನ್ನಷ್ಟು, ಮತ್ತಷ್ಟು, ಮಗದಷ್ಟು ಅತೃಪ್ತಿ ಕಾಡತೊಡಗುತ್ತದೆ. - ಸುಧೀಂದ್ರ ಹಾಲ್ದೊಡ್ಡೇರಿ

    ReplyDelete
  4. ಆದದ್ದೆಲ್ಲಾ.... ಆಗೋದೆಲ್ಲಾ.. ಒಳ್ಳೆದಕ್ಕೆ ಅ೦ತ ತಿಳ್ಕೊಳ್ಬೇಕು ashte!

    ReplyDelete