Wednesday, October 19, 2011

ಓಹ್! ಕನಸೇ ವಿಚಿತ್ರ

ಓಹ್! ಕನಸೇ ವಿಚಿತ್ರ ...........ಹೌದು...... ಅದಕ್ಕೇ ಇರಬೇಕು ಕವಿ ಹೇಳಿದ್ದು ಕನಸುಗಳ ಮಾತು ಮಧುರ ಅಂತ.... ಈ ಕನಸುಗಳೇ ಹೀಗೆ..... ಮತ್ತೆ ಮತ್ತೆ ನೆನಪಾಗಿ, ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಅಳಿಸಿ, ಕೆಲವೊಮ್ಮೆ ಸಿಟ್ಟು ತರಿಸಿ, ಕೆಲವೊಮ್ಮೆ ಮೌನವಾಗಿಸಿ, ಮತ್ತೆ ಕೆಲವೊಮ್ಮೆ ಬೊಬ್ಬಿಡುವಂತೆ ಮಾಡಿಬಿಡುತ್ತದೆ. ಈ ಅನುಭವ ಬಹುಶಃ ನನ್ನದು ಮಾತ್ರ ಅಲ್ಲ. ನಿಮ್ಮದೂ ಕೂಡಾ ಅಲ್ವಾ? ಹಾಂ, ಅಂದ ಹಾಗೆ ಕನಸು ಕಾಣುವವರಲ್ಲಿ ಬೇರೆ ಬೇರೆ ವಿಧದವರಿದ್ದಾರೆ ಅಂತ ಭಾವಿಸಿದ್ದೇನೆ. ಹಾಗೆಯೇ ಕನಸಿನಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನುವುದೂ ಸತ್ಯವೇ ಬಿಡಿ. ಕೆಲವರು ನಿದ್ದೆಯಲ್ಲಿ ಕನಸು ಕಂಡರೆ ಇನ್ನು ಕೆಲವರು ಬಸ್ ಸ್ಟ್ಯಾಂಡ್ ನಲ್ಲಿ, ತರಗತಿಗಳಲ್ಲಿ ಅಧ್ಯಾಪಕರು ಪಾಠ ಮಾಡುವಾಗ, ಕಚೇರಿಗಳಲ್ಲಿ ಕೆಲಸ ಮಾಡುವಾಗ, ಹೀಗೆ ಹಲವಾರು ಸಂದರ್ಭಗಳಲ್ಲಿ ಕನಸು ಕಾಣುವವರಿದ್ದಾರೆ. ಹಾಗೆಂದ ಮಾತ್ರಕ್ಕೆ ಕನ್ಸು ಕಾಣುವುದಕ್ಕೆ ನಿರ್ಧಿಷ್ಟ ಸ್ಥಳದ ಅಗತ್ಯ ಇದೆ ಎಂಬುದು ನನ್ನ ವಾದವಲ್ಲ. ಇನ್ನೊದು ರೀತಿಯಲ್ಲಿ ನೋಡಿದರೆ ಭವಿಷ್ಯದ ಬಗೆಗೆ ಕನಸು ಕಾಣದೇ ಇದ್ದರೆ ಮನುಷ್ಯ ಏನನ್ನೂ ಸಾಧಿಸುತ್ತಿರಲಿಲ್ಲ ಅಲ್ಲವೇ?ಯಾವನೋ ಒಬ್ಬ ಹೀರೋ ಸಿನಿಮಾದಲ್ಲಿ ಹತ್ತು ಜನರನ್ನು ಒಮ್ಮೆಲೇ ಹೊಡೆದುರುಳಿಸಿ ಬಿಟ್ಟದ್ದನ್ನು ಕಂಡು ನಾನು ಅವನಂತೆಯೇ ಮಾಡಬೇಕೆಂದು ಕನಸು ಕಾಣುವುದು, ಯಾವಳೋ ಒಬ್ಬ ನಟಿ ತುಂಡು ಬಟ್ಟೆ ಉಟ್ಟು ಹೀರೋ ಜೊತೆ ಕುಣಿಯುತ್ತಿದ್ದರೆ ಅದನ್ನೇ ವಾಸ್ತವ ಎಂದುಕೊಂಡು ನಾನೂ ಅವಳಂತಾಗುವ ಕನಸು ಕಾಣುವುದು, ಬಾರ್, ಪಬ್ ಗಳಲ್ಲಿ ಗೆಳೆಯರ ಜೊತೆ ಮಜಾ ಮಾಡುವ ಕನಸು ಕಾಣುವುದು, ಚೆಂದದ ಹುಡುಗಿ ಎಲ್ಲೋ ಹೋಗುತ್ತಿದ್ದರೆ ಆಕೆಯನ್ನು ತನ್ನವಳನ್ನಾಗಿಸಿಕೊಳ್ಳುವ ಕನಸು, ಹೀಗೆ ಇತ್ತೀಚಿನ ಕನಸುಗಳಿಗೆ ಅರ್ಥವೇ ಇಲ್ಲ ಎನಿಸಿಬಿಟ್ಟಿದೆ. ಆದರ್ಶ ಪುರುಷರ ಜೀವನ ಕಥೆಗಳನ್ನವಲೋಕಿಸಿ ನಾವೂ ಅವರಂತಾಗೋಣ ಅನ್ನುವ ಕನಸು ಕಾಣುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದೀತು..... ಇದು ಆಧುನಿಕತೆ! ?ಪ್ರತಿಯೊಂದಕ್ಕೂ ಆಧುನೀಕರಣ, ಪಾಶ್ಚಾತ್ಯೀಕರಣ, ನಗರೀಕರಣ ಅನ್ನುವ ಹಣೆಪಟ್ಟಿ ಕಟ್ಟುತ್ತೇವಲ್ಲ? ಅದಕ್ಕಿಂತ ಮೊದಲು ನಾವೇನು ಎಂಬುದನ್ನು ಆಲೋಚಿಸಿದ್ದೇವೆಯೆ? ಇವೆಲ್ಲವುಗಳಿದ್ದಾಗ್ಯು ನಾವಾರಿಸಿಕೊಂಡ ಬದುಕು ನಮಗೆ ಸಿಗುವುದು ಕಷ್ಟವಾದರೂ ಮನಸ್ಸು ಮಾಡಿದರೆ ಸಾಧ್ಯವಿಲ್ಲವೇ? ಪಬ್ಬು, ಬಾರು, ಇಸ್ಪೀಟು, ಸಿಗರೇಟು, ದಂಧೆಗಳೇ ಮೊದಲಾದುವುಗಳಿಂದ ಅಥವಾ ದೇಹದ ಏರುತಗ್ಗುಗಳೆಲ್ಲವನ್ನೂ ತೆರೆದಿಡುವಂತಹ ಉಡುಪಿನಿಂದ ಅಥವಾ ಇನ್ನೂ ಹೇಳಿಕೊಳ್ಳಲಾಗದಂತಹ ವರ್ತನೆಗಳಿಂದ ಮಾತ್ರ ಆಧುನೀಕತೆಯನ್ನು ಪ್ರತಿಬಿಂಬಿಸುವುದು ಸಾಧ್ಯವೆ?! ಇಂತಹ ಕನಸುಗಳನ್ನು ಸುಸಂಸ್ಕ್ರ‍ತ ರಾಷ್ಟ್ರ ಎನಿಸಿಕೊಂಡಿರುವ ಭಾರತಾಂಬೆಯ ಮಕ್ಕಳಾಗಿ ನಾವು ಕಾಣಬೇಕೆ?ಅಂದಿನ ಕವಿಗಳು ಕಂಡ ಹಾಗೆ, ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾವಾಗುವ ಹಾಗೆ, ಹಸುವಿನ ಕೊರಳ ಗೆಜ್ಜೆಯ ಧ್ವನಿ ಆಗುವ ಕನಸು, ನಮಗೇಕೆ ಕಾಣುವುದಿಲ್ಲ?ಯಾರದ್ದೋ ಪರ್ಸಿಗೆ ಕನ್ನ ಹಾಕಿ, ನಾನು ಶ್ರೀಮಂತನಾಗಿ ಮೆರೆಯಬೇಕು ಅನ್ನುವ ಕನಸು ಕಾಣುವುದಕ್ಕಿಂತ ಇದೆಷ್ಟೋ ವಾಸಿ ಅಲ್ಲವೇ? ಹಾಗೆಂದು ಕನಸು ಕಾಣುವುದೇ ತಪ್ಪೇ? ಖಂಡಿತಾ ಅಲ್ಲ............. ಇಂದು ಕಂಡ ಕನಸೇ ನಾಳಿನ ಭವಿಷ್ಯವನ್ನು ನಿರ್ಧರಿಸುವ ತೀರ್ಮಾನವೂ ಆಗಿರಬಹುದು. ಅದು ಆರೋಗ್ಯಕರವಾದ ಕನಸು ಕಂಡಾಗ ಮಾತ್ರ ಸಾಧ್ಯ. ಬದುಕಿನ ಒಳಿತು ಕೆಡುಕುಗಳನ್ನು ಸರಿದೂಗಿಸಿಕೊಂಡು ಬಾಳನ್ನು ಬದುಕಾಗಿಸುವ ಕನಸು ಅದು ಇರುಳು ಕಂಡದ್ದಾಗಿರಲಿ ಹಗಲು ಕಂಡದ್ದೇ ಇರಲಿ... ಉತ್ತಮ ಭವಿಷ್ಯ ನಿರ್ಮಾಣಕ್ಕೆ ದಾರಿಯಾಗಲಿ. ಕಂಡ ಕನಸುಗಳ ಕೈಗೂಡಿಸಿಕೊಳ್ಳುವ ಕಾರ್ಯಗಳಲ್ಲಿ ಕುಂದುಂಟಾಗದಿರಲಿ....... ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು, ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ತಂಗಳವೇ ಲೇಸು ಅನ್ನುವ ಸರ್ವಜ್ಞನ ಮಾತು ಸದಾ ಗಮನದಲ್ಲಿಟ್ಟುಕೊಳ್ಳೋಣ ಅಲ್ಲವೇ....................................................

 





5 comments:

  1. Thank God konegu blog baraha aarmbhavaythu.... barahagala nireeksheyalli odugariddare... munduvaresi.....

    ReplyDelete
  2. ವಿದ್ಯಾ... ಬರಹ ಚೆನ್ನಾಗಿದೆ.
    ಜೀವನದಲ್ಲಿ ಕನಸುಗಳು ಬಹು ಮುಖ್ಯ ಪಾತ್ರ ವಹಿಸುವುದು ಸುಳ್ಳಲ್ಲ. ನಾವು ಯಾವ ರೀತಿಯ ಕನಸು ಕಾಣುತ್ತೇವೆ? ಯಾ ಯಾವ ರೀತಿಯ ಕನಸುಗಳು ಬೀಳುತ್ತವೆ ಎಂಬುದು ಮುಖ್ಯವಾಗುತ್ತದೆ. ಸಕಾರಾತ್ಮಕ ಕನಸುಗಳು ಒಬ್ಬ ವ್ಯಕ್ತಿಯನ್ನು ಒಳ್ಳೆಉ ದಾರಿಯಲ್ಲಿ ಉತ್ತುಂಗಕ್ಕೆ ಏರಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ..

    ReplyDelete
  3. all the best, bareyuttaaa iri :)

    ReplyDelete
  4. ಕೆಲವೊಂದು ವಿಷಯಂಗಳ ಆಯ್ದು ನೀವು ಮಾಡಿರುವ ಚಿಂತನೆ ನಿಜಕ್ಕೂ ಶ್ಲಾಘನೀಯ. ನಿರೂಪಣಾ ಶೈಲಿ ಮೆಚ್ಚುಗೆಯಾದ ವಿಷಯ. ಪೂರ್ತಿ ಓದಿಯಾಗಿಲ್ಲ. ಮೇಲ್ಮೈ ನೋಡಿ ಓದತಕ್ಕ, ಓದಬೇಕಾದ ಬ್ಲಾಗ್ ಎಂದು ನಮೂದಿಸಿರಿಸಿರುವೆ.
    ಧನ್ಯವಾದಗಳು ಮತ್ತು ವಿಚಾರಕ್ಕೆ ಅಭಿನಂದನೆ.

    ReplyDelete